[ನಾರದ ಪ್ರಕರಣ] ನೋಟಿಸ್‌ ಜಾರಿಗೊಳಿಸದೆ ಯಾವುದೇ ನ್ಯಾಯಾಲಯ ಜಾಮೀನು ರದ್ದತಿ ಆದೇಶ ಹೊರಡಿಸಲಾಗದು: ಎ ಎಂ ಸಿಂಘ್ವಿ

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿ ಅರಿಜಿತ್‌ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠವು ವಾದ-ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
AM Singhvi, Calcutta HC
AM Singhvi, Calcutta HC
Published on

ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೈತಪ್ಪಿರುವ ನಾಲ್ವರು ಟಿಎಂಸಿ ಮುಖಂಡರು ಬುಧವಾರವೂ ಬಂಧನದಲ್ಲಿಯೇ ಕಳೆಯಲಿದ್ದಾರೆ. ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಬಂಧಿತರಾಗಿರುವ ಟಿಎಂಸಿ ಸಚಿವರಾದ ಫಿರ್ಹಾದ್‌ ಹಕೀಂ, ಸುಬ್ರತಾ ಮುಖರ್ಜಿ, ಶಾಸಕ ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ಅವರಿಗೆ ಜಾಮೀನು ಮಂಜೂರು ಮಾಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕಲ್ಕತ್ತಾ ಹೈಕೋರ್ಟ್‌ ತಡೆ ನೀಡಿತ್ತು. ಈ ತಡೆ ಅದೇಶವನ್ನು ತೆರವುಗೊಳಿಸುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಗುರುವಾರ ನಡೆದ ಸುದೀರ್ಘ ವಿಚಾರಣೆ ಅಂತಿಮವಾಗಿ ಯಾವುದೇ ಆದೇಶಕ್ಕೆ ಕಾರಣವಾಗದೆ ಗುರುವಾರಕ್ಕೆ ವಿಚಾರಣೆ ಮುಂದೂಡಲ್ಪಟ್ಟಿತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿ ಅರಿಜಿತ್‌ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠವು ವಾದ-ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು ಮುಂದೂಡಿತು. ಇದಕ್ಕೂ ಮುನ್ನ, ಸಿಬಿಐ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಇದು ವಿಶಾಲವಾದ ಪ್ರಶ್ನೆಯಾಗಿದೆ. ಹಿಂದೆಂದೂ ಕಂಡಿರದ ರೀತಿಯಲ್ಲಿ ನ್ಯಾಯದಾನಕ್ಕೆ ಭಂಗ ಉಂಟು ಮಾಡಲಾಗಿದೆ. ನ್ಯಾಯದಾನಕ್ಕೆ ಉದ್ದೇಶಪೂರ್ವಕವಾಗಿ ತಡೆಯೊಡ್ಡುವ ವ್ಯವಸ್ಥಿತ ಸಂಘಟಿತ ಕೆಲಸ ನಡೆದಿದೆ… ಸಾವಿರಾರು ಮಂದಿ ಗುಂಪಾಗಿ ನೆರೆದಿದ್ದರ ಉದ್ದೇಶ ನ್ಯಾಯಾಲಯ ನೀಡಿರುವ ಜವಾಬ್ದಾರಿಯನ್ನು ಪ್ರಧಾನ ತನಿಖಾ ಸಂಸ್ಥೆ ನಿಭಾಯಿಸದಂತೆ ತಡೆಯುವುದಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಇಂತಹ ಮತ್ತೊಂದು ಘಟನೆ ಇದುವರೆಗೆ ನಡೆದಿಲ್ಲ” ಎಂದರು.

ತಮ್ಮ ವಾದದ ವೇಳೆ ಮೆಹ್ತಾ, "ತಡೆಯಾಜ್ಞೆ ನೀಡಲು ಉದ್ಭವಿಸಿದ್ದ ಪರಿಸ್ಥಿತಿಯ ಬಗ್ಗೆ ನಾನು ಸ್ಪಷ್ಟವಾಗಿ ವಿವರಿಸಿದ್ದೇನೆ. ಜಾಮೀನಿನ ಕುರಿತು ನಿರ್ಧರಿಸದಂತೆ ನ್ಯಾಯಾಧೀಶರನ್ನು ತಡೆಯುವ ಪೂರ್ವನಿಯೋಜಿತ ಯೋಜನೆ ಅದಾಗಿತ್ತು… ಸಿಬಿಐ ಕಚೇರಿಗೆ ನುಗ್ಗಿ ಘೇರಾವ್‌ ಹಾಕಲು ಉದ್ರಿಕ್ತರ ಗುಂಪು ಪ್ರಯತ್ನಿಸಿತ್ತು. ತಮ್ಮ ಕಚೇರಿಯಿಂದ ಹೊರಹೋಗಲು ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗದಂತೆ ತಡೆಯುವ ಪೂರ್ವನಿಯೋಜಿತ ಯತ್ನ ಮಾಡಲಾಗಿದೆ. ಕಾನೂನುಬಾಹಿರವಾಗಿ ಸಿಬಿಐ ಕಚೇರಿಯ ಮುಂದೆ ಗುಂಪುಗೂಡಿ ಅಂಥ ಕೃತ್ಯದಲ್ಲಿ ತೊಡಗಿದ್ದಲ್ಲದೇ ಸಿಬಿಐ ಅಧಿಕಾರಿಗಳತ್ತ ಕಲ್ಲು ತೂರಿ ಗುಂಪು ಸತಾಯಿಸಿತು… ಆರೋಪಪಟ್ಟಿಯ ಪ್ರತಿ ಸಲ್ಲಿಸಲೂ ಗುಂಪು ಸಮಸ್ಯೆ ಉಂಟುಮಾಡಿತು…” ಎಂದು ಮೆಹ್ತಾ ವಾದಿಸಿದರು.

ಆರೋಪಿಗಳ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ “ಸಿಬಿಐ ನಿಲುವು ವಿರೋಧಾಭಾಸದಿಂದ ಕೂಡಿದೆ. ನಮಗೆ ಒಂದು ಪ್ರತಿಯನ್ನು ಒದಗಿಸದೇ, ಮಾಹಿತಿಯನ್ನೂ ನೀಡದೆ ತಡರಾತ್ರಿ ಸಿಬಿಐ ಈ ಘನ ನ್ಯಾಯಾಲಯದ ಮುಂದೆ ವಾದಿಸುವ ಮೂಲಕ ಸ್ವಾಭಾವಿಕ ನ್ಯಾಯವನ್ನು ಉಲ್ಲಂಘಿಸಿದೆ. ಸಿಬಿಐ ಘಟನೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸುವ ಮೂಲಕ ಆದೇಶ ಪಡೆದುಕೊಂಡಿದ್ದು, ಅದು ಕಾನೂನಿನಡಿ ಮಾನ್ಯಗೊಳ್ಳುವುದಿಲ್ಲ… ಆರೋಪಿಗೆ ನೋಟಿಸ್‌ ನೀಡದೇ ಮತ್ತು ಆರೋಪಿಯ ವಾದ ಆಲಿಸಿದೇ ದೇಶದ ಯಾವುದೇ ನ್ಯಾಯಾಲಯ ಜಾಮೀನು ನಿರಾಕರಿಸುವ ಆದೇಶ ಹೊರಡಿಸಲಾಗದು… ಜಾಮೀನನ್ನು ಅವರು ಪ್ರಶ್ನಿಸುವುದೇ ಆಗಿದ್ದರೆ ಸರಿಯಾದ ರೀತಿಯಲ್ಲಿ ಪ್ರಶ್ನಿಸಬೇಕಿತ್ತೇ ವಿನಾ ಈ ರೀತಿಯಲ್ಲಿ ಅಲ್ಲ” ಎಂದು ತಕರಾರು ಎತ್ತಿದರು.

“ಇದು ಹಿಂದೆಂದೂ ನಡೆದಿರಲಿಲ್ಲ ಎನ್ನುವುದಕ್ಕೆ ನನ್ನ ಸಹಮತವಿದೆ. ಸಿಬಿಐ ನಡೆಸಿರುವ ಕೃತ್ಯ ಹಿಂದೆಂದೂ ನಡೆದಿರಲಿಲ್ಲ” ಎಂದ ಸಿಂಘ್ವಿ ಅವರು “ಸ್ವಾತಂತ್ರ್ಯದ ಪರೀಕ್ಷೆ ನಡೆಯುತ್ತಿದೆ. ನನ್ನ ಗೆಳೆಯ ವಾದಿಸುತ್ತಿರುವುದು ಅವರನ್ನು 1, 2 ಅಥವಾ 3 ದಿನ ಜೈಲಿನಲ್ಲಿಡಲು… ಬಂಧಿತರ ಬೆಂಬಲಕ್ಕೆ ಸಚಿವರು ಮುಂದೆ ಬಂದಿದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಭಾವನೆ ಸೃಷ್ಟಿಸಲು ಪ್ರಯತ್ನಿಸಲಾಗಿದೆ. ಇದೆಲ್ಲವೂ ವಿಚಾರಣಾಧೀನ ನ್ಯಾಯಾಲಯದ ಮುಂದೆ ಅವರು ವಿಸ್ತೃತವಾಗಿ ವಾದಿಸಿದ ನಂತರ ನಡೆದಿರುವ ಬೆಳವಣಿಗೆಯಾಗಿದೆ” ಎಂದಿದ್ದಾರೆ.

“2014-21ರಿಂದ ಸಾಕ್ಷ್ಯಗಳಿಗೆ ಯಾವುದೇ ಬೆದರಿಕೆ ಇರಲಿಲ್ಲ. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ಹೊರತಾಗಿಯೂ ಅವರು ರಾಜ್ಯಪಾಲರನ್ನು ಸಂಪರ್ಕಿಸಿದ್ದಾರೆ. ಸಚಿವರಾಗಿರುವ ಇಬ್ಬರು ಆರೋಪಿಗಳು ಯಾವುದಾದರೂ ರೀತಿಯಲ್ಲಿ ಬೆದರಿಕೆ ಒಡ್ಡಿದ್ದಾರೆ ಎಂದು ಯಾರಾದರೂ ಹೇಳಿದ್ದಾರೆಯೇ? ಸಿಬಿಐಗೆ ಬೇಕಿದ್ದ ಸಾಕ್ಷ್ಯವನ್ನು 2011ರಿಂದ ನಾಶಪಡಿಸದವರು ಈಗ ನಾಶಪಡಿಸುತ್ತಿದ್ದರೆ? ಇದು ಸಾಮಾನ್ಯ ಜ್ಞಾನ” ಎಂದು ವಾದಿಸಿದರು.

Also Read
ನಾರದ ಹಗರಣ: ಟಿಎಂಸಿ ನಾಯಕರಿಗೆ ದೊರೆತಿದ್ದ ಜಾಮೀನಿಗೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್

“ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದಂತೆ ಪ್ರತಿಭಟನಾನಿರತರು ಸಿಬಿಐ ಅನ್ನು ತಡೆದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪ್ರತಿಭಟಿಸಬಹುದು. ತಮ್ಮ ಸಹೋದ್ಯೋಗಿಗಳನ್ನು ಏಳು ವರ್ಷಗಳ ಬಳಿಕ ಬಂಧಿಸಲಾಗಿದೆ… ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲಾಗದೇ ರಾಜಕೀಯ ದುರುದ್ದೇಶದಿಂದ ತಮ್ಮ ಸಹೋದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಶಾಸಕರಿಗೆ ಅನಿಸಿದೆ. ಜಾಮೀನು ನೀಡಿರುವುದು ಮತ್ತು ಪ್ರತಿಭಟನೆ ಎರಡಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಪ್ರತಿಭಟನೆಗಳು ನ್ಯಾಯದಾನಕ್ಕೆ ಅಡ್ಡಿಯಾಗದಿದ್ದರೆ, ಅದನ್ನು ಜಾಮೀನು ನಿರಾಕರಿಸಲು ಬಳಸಲಾಗುವುದಿಲ್ಲ” ಎಂದರು.

“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯಾವುದೇ ಪ್ರತಿಭಟನೆ ನಡೆಸಿಲ್ಲ. ಆರೋಪಿಗಳ ಕುಟುಂಬದ ಜೊತೆ ತೆರೆಳಿ ಅವರು ತಮ್ಮ ಭಿನ್ನಮತವನ್ನಷ್ಟೇ ದಾಖಲಿಸಿದ್ದಾರೆ” ಎಂದು ಸಿಂಘ್ವಿ ಸಮರ್ಥಿಸಿದರು.

Kannada Bar & Bench
kannada.barandbench.com