ಸುದ್ದಿಗಳು

[ನಾರದ ಪ್ರಕರಣ] ಹೈಕೋರ್ಟ್ ಘನತೆಗೆ ತಕ್ಕಂತೆ ನಮ್ಮ ನಡವಳಿಕೆ ಇಲ್ಲ: ಹಂಗಾಮಿ ಸಿಜೆಗೆ ಪತ್ರ ಬರೆದ ಹಾಲಿ ನ್ಯಾಯಮೂರ್ತಿ

“ಹೈಕೋರ್ಟ್‌ ವ್ಯವಸ್ಥಿತವಾಗಿ ಹೆಜ್ಜೆ ಇರಿಸಬೇಕಿದೆ. ನಾವು ನಗೆಪಾಟಲಿಗೆ ಈಡಾಗಿದ್ದೇವೆ” ಎಂದು ನ್ಯಾ. ಅರಿಂದಮ್‌ ಸಿನ್ಹಾ ಅವರು ಹಂಗಾಮಿ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Bar & Bench

ನಾರದ ಕುಟುಕು ಕಾರ್ಯಾಚಾರಣೆ ಪ್ರಕರಣದ ವಿಚಾರಣೆಯು ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಕಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅರಿಂದಮ್‌ ಸಿನ್ಹಾ ಅವರು ಹಂಗಾಮಿ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಹಾಗೂ ಇತರೆ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವುದರೊಂದಿಗೆ ಮತ್ತೊಂದು ಮಜಲಿಗೆ ತಲುಪಿದೆ. ಈ ಪತ್ರವು ʼಬಾರ್‌ ಅಂಡ್‌ ಬೆಂಚ್‌ʼಗೆ ಲಭ್ಯವಾಗಿದೆ.

ನಾರದಾ ಪ್ರಕರಣದ ವರ್ಗಾವಣೆ ಕುರಿತು ಕೇಂದ್ರೀಯ ತನಿಖಾ ದಳವು (ಸಿಬಿಐ) ಸಲ್ಲಿಸಿದ್ದ ರಿಟ್‌ ಮನವಿಯನ್ನು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಒಳಪಡಿಸಿದ್ದ ಕ್ರಮಕ್ಕೆ ನ್ಯಾ. ಸಿನ್ಹಾ ಅವರು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ನ್ಯಾಯಾಲಯಕ್ಕೆ ಸಿಬಿಐ ಇಮೇಲ್‌ ಕಳುಹಿಸಿದ್ದನ್ನು ಆಧರಿಸಿ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವೈಜೆ ದಸ್ತೂರ್‌ ಕೋರಿಕೆಯ ಹಿನ್ನೆಲೆಯಲ್ಲಿ ಮೇ 17ರಂದು ಕ್ರಿಮಿನಲ್‌ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 407ರ ಅಡಿ ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ವರ್ಗಾವಣೆಯ ಮನವಿಯ ವಿಚಾರಣೆ ನಡೆಸಿತ್ತು.

“ಇಂಥ ಪ್ರಕರಣಗಳ ಪಟ್ಟಿ ಮಾಡುವ ವಿಧಾನವನ್ನು ನಿಯಂತ್ರಿಸುವ ಹೈಕೋರ್ಟ್‌ನ ಮೇಲ್ಮನವಿ ವಿಭಾಗದ ನಿಯಮಗಳ ಪ್ರಕಾರ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣದ ವರ್ಗಾವಣೆಯನ್ನು ಕೋರುವ ಪ್ರಸ್ತಾಪವನ್ನು ಏಕ ಸದಸ್ಯ ಪೀಠ ಮೊದಲಿಗೆ ಆಲಿಸಬೇಕಾಗುತ್ತದೆ” ಎಂದು ನ್ಯಾ. ಸಿನ್ಹಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಇದು ರಿಟ್‌ ಮನವಿ ಎಂದು ಮೊದಲಿಗೆ ವಿಭಾಗೀಯ ಪೀಠ ಅದರ ವಿಚಾರಣೆ ನಡೆಸಿತು. ಸಂವಿಧಾನದ 228ನೇ ವಿಧಿಯಡಿ ರಿಟ್‌ ಮನವಿಯು ಸಹ ಮೊದಲಿಗೆ ಏಕಸದಸ್ಯ ಪೀಠದ ನಿರ್ಧಾರಕ್ಕೆ ಒಳಪಡಬೇಕು” ಎಂದು ಹೇಳಿದ್ದಾರೆ.

ಕಾನೂನಿನ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಶ್ನೆಗಳನ್ನು ಎತ್ತದಿರುವುದರಿಂದ ಸಿಬಿಐ ಮೇ 17ರಂದು ನ್ಯಾಯಾಲಯಕ್ಕೆ ಕಳುಹಿಸಿದ್ದ ಇಮೇಲ್‌ ಅನ್ನು ರಿಟ್‌ ಮನವಿ ಎಂದು ಪರಿಗಣಿಸುವ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ. “ ಉದ್ರಿಕ್ತ ಗುಂಪಿನ ವಿಚಾರ ನ್ಯಾಯ ನಿರ್ಣಯದ ಪ್ರಸ್ತಾಪಕ್ಕೆ ಆಧಾರ ಎಂದೆನಿಸದರೂ ಇದನ್ನು ರಿಟ್‌ ಮನವಿಯನ್ನಾಗಿ ಪರಿಗಣಿಸಿ ವಿಭಾಗೀಯ ಪೀಠ ವಿಚಾರಣೆ ನಡೆಸಬೇಕಿತ್ತೇ ಎಂಬುದು ಮೊದಲ ಪ್ರಶ್ನೆಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಟಿಎಂಸಿ ಸಚಿವರು ಮತ್ತು ಬೆಂಬಲಿಗರನ್ನು ಒಳಗೊಂಡ ಉದ್ರಿಕ್ತರ ಗುಂಪು ನಿಯಮಗಳನ್ನು ಉಲ್ಲಂಘಿಸಿ ಸಿಬಿಐ ಕಚೇರಿ ಮತ್ತು ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ನೆರೆದಿದ್ದನ್ನು ಉಲ್ಲೇಖಿಸಿ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸಿಬಿಐ ಕೋರಿತ್ತು.

ಇದಲ್ಲದೇ ನ್ಯಾ. ಸಿನ್ಹಾ ಅವರು ವಿಶೇಷ ಸಿಬಿಐ ನ್ಯಾಯಾಲಯವು ಆರೋಪಿತ ಟಿಎಂಸಿ ನಾಯಕರಿಗೆ ಮಂಜೂರು ಮಾಡಿದ್ದ ಜಾಮೀನಿಗೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದನ್ನೂ ಪ್ರಶ್ನಿಸಿದ್ದಾರೆ. “ಕ್ರಿಮಿನಲ್‌ ಪ್ರಕರಣದ ವರ್ಗಾವಣೆಯ ವಿಚಾರದಲ್ಲಿ ತನ್ನದೇ ಆದ ಉಪಕ್ರಮದ ಮೂಲಕ ಅಧಿಕಾರ ಚಲಾಯಿಸುವ ಹೈಕೋರ್ಟ್‌, ತಡೆಯಾಜ್ಞೆ ಹೊರಡಿಸಿಬಹುದೇ ಎಂಬುದು ಎರಡನೇ ಪ್ರಶ್ನೆಯಾಗಿದೆ” ಎಂದಿದ್ದಾರೆ.

ಜಾಮೀನಿನ ವಿಚಾರದಲ್ಲಿ ವಿಭಾಗೀಯ ಪೀಠದಲ್ಲಿ ಭಿನ್ನಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪಂಚ ಪೀಠಕ್ಕೆ ವರ್ಗಾಯಿಸಿದ್ದ ನಿರ್ಧಾರಕ್ಕೂ ನ್ಯಾ. ಸಿನ್ಹಾ ಅವರು ಆಕ್ಷೇಪಿಸಿದ್ದಾರೆ. ಯಾವುದೇ ಅಂಶ ಅಥವಾ ವಿಚಾರಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಲ್ಲಿ ಭಿನ್ನಮತ ಮೂಡಿದರೆ ಅದಕ್ಕೆ ಸಂಬಂಧಿಸಿದಂತೆ ಮೂರನೇ ನ್ಯಾಯಮೂರ್ತಿಯ ಅಭಿಪ್ರಾಯ ಕೋರಲಾಗುತ್ತದೆ. ಒಂದು ವಿಭಾಗೀಯ ಪೀಠ ತೆಗೆದುಕೊಂಡ ನಿಲುವಿಗೂ ಮತ್ತೊಂದು ವಿಭಾಗೀಯ ಪೀಠದ ನಿಲುವಿಗೂ ನಡುವೆ ವ್ಯತ್ಯಾಸ ಕಂಡುಬಂದಾಗ ನಿಯಮಾವಳಿಗಳ ಅನ್ವಯ ಪೂರ್ಣ ಪೀಠದ ಉಲ್ಲೇಖವಾಗುತ್ತದೆ ಎಂದು ಹೇಳಲಾಗಿದೆ.

ಹೈಕೋರ್ಟ್‌ ವ್ಯವಸ್ಥಿತವಾಗಿ ಹೆಜ್ಜೆ ಇರಿಸಬೇಕಿದೆ ಎಂದಿರುವ ನ್ಯಾ. ಸಿನ್ಹಾ ಅವರು “ನಮ್ಮ ನಡತೆಯು ಹೈಕೋರ್ಟ್‌ ಘನತೆಗೆ ತಕ್ಕಂತೆ ಇಲ್ಲ. ನಾವು ನಗೆಪಾಟಲಿಗೆ ಈಡಾಗಿದ್ದೇವೆ” ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

“ನಮ್ಮ ನಿಯಮಗಳ ಪಾವಿತ್ರ್ಯತೆ ಮತ್ತು ಅಲಿಖಿತ ನೀತಿ ಸಂಹಿತೆಯನ್ನು ಪುನರುಚ್ಚರಿಸುವ ದೃಷ್ಟಿಯಿಂದ” ಅಗತ್ಯ ಬಿದ್ದರೆ ಪೂರ್ಣ ಪೀಠವು ಸೇರಿದಂತೆ ಅಗತ್ಯ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಪರಿಹರಿಸುವಂತೆ ಎಲ್ಲಾ ನ್ಯಾಯಮೂರ್ತಿಗಳನ್ನು ಅವರು ಕೋರಿದ್ದಾರೆ.