Bombay High Court 
ಸುದ್ದಿಗಳು

ದಾಭೋಲ್ಕರ್ ಹತ್ಯೆ ಆರೋಪಿಗಳ ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿ: ಸಿಬಿಐಗೆ ನೋಟಿಸ್ ನೀಡಿದ ಬಾಂಬೆ ಹೈಕೋರ್ಟ್

ಇಬ್ಬರನ್ನು ದೋಷಿಗಳೆಂದು ಘೋಷಿಸಿ ಮೂವರನ್ನು ಖುಲಾಸೆಗೊಳಿಸಿ ಮೇ 2024ರಲ್ಲಿ ಪುಣೆ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದಾಭೋಲ್ಕರ್ ಅವರ ಪುತ್ರಿ ಮುಕ್ತಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪೀಠ ನೋಟಿಸ್ ಜಾರಿ ಮಾಡಿತು.

Bar & Bench

ವಿಚಾರವಾದಿ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್ ಅವರ ಹತ್ಯೆಯ ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ [ಮುಕ್ತಾ ನರೇಂದ್ರ ದಾಭೋಲ್ಕರ್ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ].

ಇಬ್ಬರನ್ನು ದೋಷಿಗಳೆಂದು ಘೋಷಿಸಿ ಮೂವರನ್ನು ಖುಲಾಸೆಗೊಳಿಸಿ ಮೇ 2024ರಲ್ಲಿ ಪುಣೆ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದಾಭೋಲ್ಕರ್ ಅವರ ಪುತ್ರಿ ಮುಕ್ತಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.

ಶಿಕ್ಷೆಗೆ ಒಳಗಾದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನೂ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.

ಆರೋಪಿಗಳಾದ ಸಚಿನ್‌ ಅಂದೂರೆ, ಶರದ್‌ ಕಲಾಸ್ಕರ್‌ ಅವರನ್ನು ದೋಷಿಗಳು ಎಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿದ್ದ ಪುಣೆಯ ಸೆಷನ್ಸ್‌ ನ್ಯಾಯಾಲಯ ಡಾ. ವೀರೇಂದ್ರಸಿಂಗ್‌ ತಾವಡೆ, ವಿಕ್ರಮ್‌ ಭಾವೆ ಮತ್ತು ಸಂಜೀವ್‌ ಪುನಲೇಕರ್‌ ಅವರನ್ನು ಮೇ 10, 2024 ರಂದು ಖುಲಾಸೆಗೊಳಿಸಿತ್ತು.

ಸುಮಾರು ಮೂರು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ನ್ಯಾಯಾಧೀಶ ಪಿ ಪಿ ಜಾಧವ್ ಅವರು ತೀರ್ಪು ಪ್ರಕಟಿಸಿದ್ದರು.

ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ನರೇಂದ್ರ ದಾಭೋಲ್ಕರ್‌ ಅವರನ್ನು ಇಬ್ಬರು ದುಷ್ಕರ್ಮಿಗಳು 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಕೊಂದಿದ್ದರು. ಸನಾತನ ಸಂಸ್ಥಾ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪಿಗಳನ್ನು ಕೇಂದ್ರೀಯ ತನಿಖಾ ತಂಡವು 2016 ರಿಂದ 2019ರ ಅವಧಿಯಲ್ಲಿ ಬಂಧಿಸಿತ್ತು.

2014ರಲ್ಲಿ ಪುಣೆ ನಗರ ಪೊಲೀಸರಿಂದ ಸಿಬಿಐಗೆ ಪ್ರಕರಣ ವರ್ಗಾವಣೆಯಾಗಿದ್ದು, ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಆರೋಪಿಗಳಾದ ಡಾ. ವೀರೇಂದ್ರ ಸಿಂಗ್‌ ತಾವಡೆ, ಸಚಿನ್‌ ಅಂದೂರೆ, ಶರದ್‌ ಕಲಾಸ್ಕರ್‌ ಮತ್ತು ವಿಕ್ರಮ್‌ ಭಾವೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 120ಬಿ (ಕ್ರಿಮಿನಲ್‌ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ, ಹೆಚ್ಚುವರಿಯಾಗಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅನ್ವಯಿಸಲಾಗಿತ್ತು.

ಮುಂಬೈ ಮೂಲದ ವಕೀಲ ಹಾಗೂ ಆರೋಪಿ ಪುನಲೇಕರ್‌ ವಿರುದ್ಧ ಐಪಿಸಿ ಸೆಕ್ಷನ್‌ 201ರ ಅಡಿ ಸಾಕ್ಷ್ಯ ನಾಶ ಪ್ರಕರಣ ದಾಖಲಿಸಲಾಗಿತ್ತು.  

ಎಲ್ಲಾ ಐವರು ಆರೋಪಿಗಳ ವಿರುದ್ಧ 2021ರ ಸೆಪ್ಟೆಂಬರ್‌ 15ರಂದು ಪುಣೆಯ ಸತ್ರ ನ್ಯಾಯಾಲಯವು ಐವರು ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಿತ್ತು.

ಡಾ. ದಾಭೋಲ್ಕರ್‌ ಹತ್ಯೆ ಮಾಡುವ ಮೂಲಕ ಜನರಲ್ಲಿ ಭೀತಿ ಸೃಷ್ಟಿಸಿ, ಸಾರ್ವಜನಿಕರು ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯಲ್ಲಿ ಭಾಗವಹಿಸದಂತೆ ಮಾಡುವ ಪಿತೂರಿ ಆರೋಪಿಗಳದ್ದಾಗಿತ್ತು ಎಂದು ನ್ಯಾಯಾಲಯ ಆ ವೇಳೆ ತಿಳಿಸಿತ್ತು.