Narendra Modi and former BSF Jawan Tej Bahadur  
ಸುದ್ದಿಗಳು

ಪ್ರಧಾನಿ ಆಯ್ಕೆ ಪ್ರಶ್ನಿಸಿ ತೇಜ್‌ ಬಹದ್ದೂರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದೇಕೆ ಗೊತ್ತೆ?

“ಅಭ್ಯರ್ಥಿ ಎರಡು ದಿನಗಳವರೆಗೆ ಸಮಾಯವಕಾಶ ಕೋರಬಹುದಾಗಿದ್ದರೂ ಅವರು ಅದಕ್ಕೆ ಮುಂದಾಗಿರಲಿಲ್ಲ” ಎಂದು ಪ್ರಧಾನಿ ಮೋದಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

Bar & Bench

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆಯನ್ನು ಪ್ರಶ್ನಿಸಿ ಸಮಾಜವಾದಿ ಪಕ್ಷದ ತಿರಸ್ಕೃತ ಅಭ್ಯರ್ಥಿ, ಗಡಿ ಭದ್ರತಾಪಡೆಯ ಮಾಜಿ ಯೋಧ ತೇಜ್‌ ಬಹದ್ದೂರ್ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ), ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ʼಅರ್ಜಿಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಿರುವುದು ಸೂಕ್ತ ಎಂದು ನಾವು ಅಭಿಪ್ರಾಯಪಡುತ್ತಿದ್ದು ಈ ಸಿವಿಲ್‌ ಅರ್ಜಿಯನ್ನು ವಜಾಗೊಳಿಸಲಾಗಿದೆʼ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರಿಗೆ ಪ್ರಕರಣದಲ್ಲಿ ಯಾವುದೇ ವ್ಯಾಜ್ಯ ಕಾರಣಗಳಿಲ್ಲದೆ ಇರುವುದನ್ನು ಪೀಠವು ವಿಚಾರಣೆಯ ವೇಳೆ ಗುರುತಿಸಿತು. ತಮ್ಮ ಹಕ್ಕನ್ನು ಕಾನೂನಾತ್ಮಕವಾಗಿ ಪ್ರತಿಪಾದಿಸಲು ಬೇಕಾದ ಯಾವುದೇ ಹಿತಾಸಕ್ತಿಯ ಪ್ರಶ್ನೆ ಅರ್ಜಿದಾರರಿಗೆ ಪ್ರಕರಣದಲ್ಲಿ ಇಲ್ಲ. ಹೀಗಾಗಿ ಅವರಿಗೆ ಪ್ರತಿವಾದಿಗಳನ್ನು ಶಿಕ್ಷಿಸುವುದಕ್ಕೆ ಬೇಕಾದ ಹಕ್ಕು (ಲೋಕಸ್‌ ಸ್ಟ್ಯಾಂಡಿ) ಪ್ರಕರಣದಲ್ಲಿ ಲಭ್ಯವಾಗುವುದಿಲ್ಲ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

ಶೋ ಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸಲು ಚುನಾವಣಾಧಿಕಾರಿ (ರಿಟರ್ನಿಂಗ್ ಆಫೀಸರ್) ತೇಜ್ ಬಹದ್ದೂರ್‌‌ ಅವರಿಗೆ ಸಾಕಷ್ಟು ಸಮಯವನ್ನು ನೀಡಿದ್ದಾರೋ ಇಲ್ಲವೋ ಎಂಬ ಅಂಶದ ಬಗ್ಗೆ ಸುಪ್ರೀಂಕೋರ್ಟ್‌ ಪ್ರಾಥಮಿಕವಾಗಿ ಗಮನಹರಿಸಿತು. "ಚುನಾವಣಾಧಿಕಾರಿ ಏಪ್ರಿಲ್ 30 ರಂದು ನೋಟಿಸ್ ನೀಡಿದ್ದರು. ಮರುದಿನವೇ ನನ್ನ ನಾಮಪತ್ರ ತಿರಸ್ಕರಿಸಲಾಯಿತು. ಸಾಕಷ್ಟು ಸಮಯ ನೀಡಿರಲಿಲ್ಲ" ಎಂದು ಬಹದ್ದೂರ್ ಅಹವಾಲು ಸಲ್ಲಿಸಿದ್ದರು. “ಅಭ್ಯರ್ಥಿ ಎರಡು ದಿನಗಳವರೆಗೆ ಸಮಾಯವಕಾಶ ಕೋರಬಹುದಾಗಿದ್ದರೂ ಅವರು ಅದಕ್ಕೆ ಮುಂದಾಗಿರಲಿಲ್ಲ” ಎಂದು ಪ್ರಧಾನಿ ಮೋದಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಮತ್ತೊಂದೆಡೆ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿಗಳು “ ತೇಜ್‌ ಬಹದ್ದೂರ್‌ ಅವರನ್ನು ಭ್ರಷ್ಟಾಚಾರ/ ದೇಶದ್ರೋಹದ ಕಾರಣಕ್ಕೆ ಬಿಎಸ್‌ಎಫ್‌ ವಜಾಗೊಳಿಸಿಲ್ಲ ಎಂಬ ಪ್ರಮಾಣ ಪತ್ರವನ್ನು ನಾಮಪತ್ರದೊಟ್ಟಿಗೆ ಸಲ್ಲಿಸಲು ಅವರು ವಿಫಲರಾಗಿದ್ದಾರೆ” ಎಂದು ಹೇಳಿದ್ದರು.

ವಾರಾಣಸಿ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಅನೂರ್ಜಿತಗೊಳಿಸಿರುವುದನ್ನು ಪ್ರಶ್ನಿಸಿ ತೇಜ್‌ ಬಹದ್ದೂರ್‌ ಅರ್ಜಿ ಸಲ್ಲಿಸಿದ್ದರು. ಮೊದಲು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಅವರು ನಂತರ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದರು. ತಮ್ಮ ಸ್ಪರ್ಧೆಗೆ ಅವಕಾಶ ನೀಡದೇ ಇದ್ದುದರಿಂದ ಮೋದಿ ಸುಲಭವಾಗಿ ಜಯಗಳಿಸಿದರು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಅವರು 2019ರ ಮೇನಲ್ಲಿ ಮೊದಲು ಸುಪ್ರೀಂಕೋರ್ಟ್‌ ಕದ ತಟ್ಟಿದ್ದರು. ಆದರೆ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಕೂಡ ಮನವಿಯನ್ನು ತಿರಸ್ಕರಿಸಿತ್ತು. 2020ರ ಫೆಬ್ರವರಿಯಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.