Madras High Court
Madras High Court 
ಸುದ್ದಿಗಳು

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಪ್ರತಿಬಂಧಕಾಜ್ಞೆ ನೀಡುವ ಅಧಿಕಾರವಿಲ್ಲ: ಮದ್ರಾಸ್ ಹೈಕೋರ್ಟ್

Bar & Bench

ತಾನು ಸ್ವೀಕರಿಸುವ ಯಾವುದೇ ದೂರನ್ನು ತನಿಖೆ ಮಾಡುವ ಅಧಿಕಾರ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಇದ್ದರೂ ಮಧ್ಯಂತರ ಅಥವಾ ಶಾಶ್ವತ ಪ್ರತಿಬಂಧಕಾಜ್ಞೆ ನೀಡುವ ಅಧಿಕಾರ ಅದಕ್ಕಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ದೇವಾಲಯವೊಂದರ ಜಮೀನಿಗೆ ಸಂಬಂಧಿಸಿದಂತೆ ಅತಿಕ್ರಮ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಂತಹ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಿರ್ಬಂಧಿಸಿ ಅಕ್ಟೋಬರ್ 2022 ರಲ್ಲಿ ಆಯೋಗ ಹೊರಡಿಸಿದ್ದ ಮಧ್ಯಂತರ ಪ್ರತಿಬಂಧಕಾಜ್ಞೆಯನ್ನು ರದ್ದುಗೊಳಿಸುವ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಪೀಠ ಈ ಅವಲೋಕನ ಮಾಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಹಾಗೂ ತನಗೆ ಮಾಹಿತಿ ನೀಡದೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಇಲಾಖೆಗೆ ಆಯೋಗ ಸೂಚಿಸಿತ್ತು. ನಡಾವಳಿ ಕಡೆಗಣಿಸಿ ಆಯೋಗ ಇಂತಹ ಆದೇಶ ನೀಡಿದೆ ಎಂಬುದಾಗಿ ಪೀಠ ತಿಳಿಸಿದೆ.

ದೇವಾಲಯದ ಭಕ್ತರೆನ್ನಲಾದ ಜಯರಾಮನ್ ಟಿ ಎನ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಜಯರಾಮನ್ ಅವರು ಯಥಾಸ್ಥಿತಿ ಆದೇಶ ಕೈಬಿಡುವಂತೆ ನ್ಯಾಯಾಲಯವನ್ನು ಕೋರಿದ್ದರು. ತಡೆಯಾಜ್ಞೆ ನೀಡಲು ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ವಾದ ಆಲಿಸಿದ ನ್ಯಾಯಾಲಯ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಪ್ರತಿಬಂಧಕಾಜ್ಞೆ ನೀಡುವ ಅಧಿಕಾರವನ್ನು ಸಂವಿಧಾನದ 338 (8) ವಿಧಿ ನೀಡಿದೆ ಎಂದು ಊಹಿಸಲಾಗದು ಎಂಬುದಾಗಿ ನುಡಿಯಿತು.