ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಅಲ್ಲಿನ ರಾಜ್ಯಪಾಲರು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸೂಚಿಸಿರುವ ಬೆನ್ನಲ್ಲೇ ವಿಶ್ವಾಸಮತ ಯಾಚನೆ ವೇಳೆ ತಮಗೆ ಮತ ಚಲಾಯಿಸಲು ಅನುಮತಿ ನೀಡುವಂತೆ ಕೋರಿ ಬಂಧಿತರಾಗಿರುವ ಸಚಿವ ನವಾಬ್ ಮಲಿಕ್ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಲಿಕ್ ಮತ್ತು ದೇಶಮುಖ್ ಇಬ್ಬರೂ ಬಂಧಿತರಾಗಿದ್ದಾರೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ರಜಾಕಾಲೀನ ಪೀಠದೆದುರು ವಕೀಲ ಸುಧಾಂಶು ಚೌಧರಿ ಅವರು ಪ್ರಕರಣವನ್ನು ಪ್ರಸ್ತಾಪಿಸಿದರು. ಇಂದು ಸಂಜೆ 5.30ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಅದು ತಿಳಿಸಿದೆ.
ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆಯನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಂಜೆ 5ಕ್ಕೆ ಪೀಠ ವಿಚಾರಣೆ ನಡೆಸಲಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶಾಮೀಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಅನಿಲ್ ದೇಶಮುಖ್ ಸರಳುಗಳ ಹಿಂದಿದ್ದಾರೆ. ಇಬ್ಬರೂ ಈ ಹಿಂದೆ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅನುಮತಿ ನೀಡುವಂತೆ ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಅವರಿಬ್ಬರೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮತದಾನಕ್ಕೆ ಅನುಮತಿ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಬಂಧಿತ ಶಾಸಕರ ಮತದಾನದ ಹಕ್ಕುಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತ್ತು.