ಸುದ್ದಿಗಳು

ಉದ್ಯಮಿ ಹತ್ಯೆ ಪ್ರಕರಣ: ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿಯ ಕೋಕಾ ನ್ಯಾಯಾಲಯ

Bar & Bench

ಉತ್ತರ ಕನ್ನಡ ಜಿಲ್ಲೆಯ ಅದಿರು ಉದ್ಯಮಿ ಆರ್‌ ಎನ್‌ ನಾಯಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಗೆ ಸೋಮವಾರ ಬೆಳಗಾವಿಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಸ್ಥಾಪನೆಯಾಗಿರುವ (ಸಿಒಸಿಎ- ಕೋಕಾ) ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಉಡುಪಿ ಮೂಲದ ಬನ್ನಂಜೆ ರಾಜಾ, ಉತ್ತರಪ್ರದೇಶದ ಜಗದೀಶ್‌ ಪಟೇಲ್‌, ವಿಜಯಪುರದ ಅಂಬಾಜಿ ಬಂಡುಗೋರ, ಕಾರ್ಕಳದ ಮಂಜುನಾಥ ನಾರಾಯಣ ಭಟ್‌, ಕೇರಳದ ಕೆ ಎಂ ಇಸ್ಲಾಯಿಲ್‌, ಹಾಸನದ ಮಹೇಶ್‌ ಅಚ್ಚಂಗಿ, ಕೇರಳದ ಎಂ ಬಿ ಸಂತೋಷ, ಬೆಂಗಳೂರಿನ ಜಗದೀಶ್‌ ಚಂದ್ರರಾಜ್‌ ಅರಸ್‌, ಉತ್ತರ ಪ್ರದೇಶದ ಅಂಕಿತ್‌ ಕುಮಾರ್‌ ಕಶ್ಯಪ್‌ ಅವರಿಗೆ ನ್ಯಾಯಾಧೀಶ ಸಿ ಎಂ ಜೋಶಿ ಜೀವಾವಧಿ ಶಿಕ್ಷೆ ಪ್ರಕಟಿಸಿದರು.

ಬುಧವಾರ 2022ರ ಮಾರ್ಚ್‌ 30 ರಂದು ಒಂಬತ್ತು ಮಂದಿಯನ್ನು ದೋಷಿಗಳು ಎಂದು ಘೋಷಿಸಿದ್ದ ನ್ಯಾಯಾಲಯ ಕೇರಳದ ರಬ್ದಿನ್‌ ಫಿಚೈ, ಬೆಂಗಳೂರಿನ ಮಹಮದ್‌ ಶಾಬಂದರಿ ಹಾಗೂ ಉತ್ತರ ಕನ್ನಡದ ಆನಂದ್‌ ರಮೇಶ್‌ ನಾಯಕ್‌ ದೋಷಮುಕ್ತಗೊಳಿಸಿತ್ತು. ಪ್ರಕರಣದ ಇತರ ಆರೋಪಿಗಳಾದ ಭಟ್ಕಳದ ನಜೀಂ ನೀಲಾವರ್‌, ಮಂಗಳೂರಿನ ಹಾಜಿ ಆಮಿನ್‌ ಬಾಷಾ, ಸಕಲೇಶಪುರದ ಸುಲೇಮಾನ್‌ ಜೈನುದ್ದೀನ್‌ ತಲೆಮರೆಸಿಕೊಂಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ ಜಿ ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್‌ ಆಳ್ವ ವಾದಿಸಿದ್ದರು.

ಅಂಕೋಲೆಯ ಉದ್ಯಮಿ ನಾಯಕ್‌ ಅವರಿಗೆ 3 ಕೋಟಿ ರೂ ಹಫ್ತಾ ನೀಡುವಂತೆ ಬನ್ನಂಜೆ ರಾಜಾ 2012ರಲ್ಲಿಜೀವ ಬೆದರಿಕೆ ಹಾಕಿದ್ದ. ಹಣ ನೀಡಲು ನಾಯಕ್‌ ನಿರಾಕರಿಸಿದ್ದರು. ತಾವು ಅಧ್ಯಕ್ಷರಾಗಿದ್ದ ನಗರದ ದ್ವಾರಕಾ ಕೊ ಆಪರೇಟಿವ್‌ ಸೊಸೈಟಿಯಿಂದ ಮನೆಗೆ ತೆರಳುತ್ತಿದ್ದಾಗ 2013ರ ಡಿ 21ರಂದು ಬಂದೂಕುಧಾರಿಗಳು ನಾಯಕ್‌ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದೇ ವೇಳೆ ಉತ್ತರ ಪ್ರದೇಶದ ಶಾರ್ಪ್‌ ಶೂಟರ್‌ ವಿವೇಕ್‌ ಕುಮಾರ್‌ ಉಪಾಧ್ಯನನ್ನು ನಾಯಕ್‌ ಅವರ ಗನ್‌ ಮ್ಯಾನ್‌ ಗುಂಡಿಟ್ಟು ಕೊಂದಿದ್ದರು.