ಉದ್ಯಮಿ ಕೊಲೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು ಎಂದು ಘೋಷಿಸಿದ ಬೆಳಗಾವಿ ಕೋಕಾ ನ್ಯಾಯಾಲಯ

2000ನೇ ಇಸವಿಯಲ್ಲಿ ಕೋಕಾ ಕಾಯಿದೆ ರೂಪುಗೊಂಡಿತ್ತು. ಕಾಯಿದೆಯಡಿ ಬನ್ನಂಜೆ ರಾಜನ ವಿರುದ್ಧವೇ ಮೊದಲ ಪ್ರಕರಣ ದಾಖಲಾಗಿತ್ತು. ಇದೇ ಏಪ್ರಿಲ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
Bannanje Raja
Bannanje Rajanewskarnataka.com

ಉತ್ತರ ಕನ್ನಡ ಜಿಲ್ಲೆಯ ಅದಿರು ಉದ್ಯಮಿ ಆರ್‌ ಎನ್‌ ನಾಯಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಜನ ಆರೋಪಿಗಳು 'ದೋಷಿಗಳು' ಎಂದು ಬೆಳಗಾವಿಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಸ್ಥಾಪನೆಯಾಗಿರುವ (ಸಿಒಸಿಎ- ಕೋಕಾ) ನ್ಯಾಯಾಲಯ ಮಹತ್ವದ ತೀರ್ಪಿತ್ತಿದೆ.

ನ್ಯಾಯಾಧೀಶ ಸಿ ಎಂ‌ ಜೋಶಿ ಅವರು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದು ಇದೇ ಏಪ್ರಿಲ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹದಿನಾರು ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಅವರಲ್ಲಿ ಮೂವರು ತಲೆಮರಿಸಿಕೊಂಡಿದ್ದರು. ಇನ್ನು ಮೂವರನ್ನು ನಿರ್ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ. ಉತ್ತರ ಪ್ರದೇಶದ ಜಗದೀಶ್‌ ಪಟೇಲ್‌, ಬೆಂಗಳೂರಿನ ಅಭಿ ಭಂಡಗಾರ, ಉಡುಪಿಯ ಗಣೇಶ್‌ ಭಜಂತ್ರಿ, ಕೇರಳದ ಕೆ ಎಂ ಇಸ್ಮಾಯಿಲ್‌, ಹಾಸನದ ಮಹೇಶ್‌ ಅಚ್ಚಂಗಿ, ಕೇರಳದ ಎಂ ಬಿ ಸಂತೋಷ, ಉಡುಪಿಯ ಬನ್ನಂಜೆ ರಾಜ, ಬೆಂಗಳೂರಿನ ಜಗದೀಶ್‌ ಚಂದ್ರರಾಜ್‌, ಉತ್ತರ ಪ್ರದೇಶದ ಅಂಕಿತ್‌ ಕುಮಾರ್‌ ಕಶ್ಯಪ್‌ ದೋಷಿಗಳೆಂದು ತೀರ್ಪು ಹೇಳಿದೆ.

ಇದೇ ವೇಳೆ ನ್ಯಾಯಾಲಯ ಮೂವರು ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಿದೆ. ಕೇರಳದ ರಬ್ದಿನ್‌ ಫಿಚೈ, ಬೆಂಗಳೂರಿನ ಮಹಮದ್‌ ಶಾಬಂದರಿ ಹಾಗೂ ಉತ್ತರ ಕನ್ನಡದ ಆನಂದ್‌ ರಮೇಶ್‌ ನಾಯಕ್‌ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ.

2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ನಡೆದ ಆರ್ ಎನ್ ನಾಯಕ್​ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಹೊರಬಿದ್ದಿತು.

Also Read
ತಿಹಾರ್ ಜೈಲಿನಲ್ಲಿ ಯುನಿಟೆಕ್ ಪ್ರವರ್ತಕರ ಭೂಗತ ಕಚೇರಿ: ಮುಂಬೈ ಜೈಲಿಗೆ ಆರೋಪಿಗಳ ಸ್ಥಳಾಂತರಕ್ಕೆ ʼಸುಪ್ರೀಂʼ ಆದೇಶ

ಹತ್ಯೆ ಮಾಡಿದ್ದ ಶಾರ್ಪ್‌ ಶೂಟರ್‌

ರೂ 3 ಕೋಟಿ ಹಫ್ತಾ ನೀಡದಿದ್ದರೆ ಉದ್ಯಮಿ ನಾಯಕ್‌ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ನಾಯಕ್‌ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು. 2013ರ ಡಿಸೆಂಬರ್ 21ರಂದು ನಾಯಕ್‌ ಅವರನ್ನು ಉತ್ತರ ಪ್ರದೇಶದ ಶಾರ್ಪ್‌ ಶೂಟರ್‌ ವಿವೇಕ್‌ ಉಪಾಧ್ಯಾಯ ಗುಂಡಿಕ್ಕಿ ಹತ್ಯೆ ಮಾಡಿದ್ದ. ತಕ್ಷಣವೇ ಆರ್‌ ಎನ್‌ ನಾಯಕ್‌ ಅವರ ಗನ್‌ಮ್ಯಾನ್‌ ವಿವೇಕ್‌ನನ್ನು ಬೆನ್ನತ್ತಿ ಗುಂಡಿಟ್ಟು ಕೊಂದಿದ್ದರು. ಘಟನೆ ನಡೆದ ಮರುದಿನ ಕೆಲ ಮಾಧ್ಯಮಗಳಿಗೆ ಫೋನ್‌ ಮಾಡಿದ್ದ ಬನ್ನಂಜೆ ರಾಜ ತಾನೇ ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದ್ದ.

ಕೋಕಾದಡಿಯ ಮೊದಲ ಪ್ರಕರಣ

2000ನೇ ಇಸವಿಯಲ್ಲಿ ರೂಪುಗೊಂಡ ಕೋಕಾ ಕಾಯಿದೆ ರೂಪುಗೊಂಡಿತ್ತು. ಕಾಯಿದೆ ರೂಪುಗೊಂಡ ಬಳಿಕ ಬನ್ನಂಜೆ ರಾಜ ವಿರುದ್ಧವೇ ಮೊದಲ ಪ್ರಕರಣ ದಾಖಲಾಗಿತ್ತು. ಮೊರಕ್ಕೊದಲ್ಲಿ 2015ರ ಫೆಬ್ರವರಿ 12ರಂದು ಬಂಧಿತನಾಗಿದ್ದ ರಾಜನನ್ನು ಭಾರತಕ್ಕೆ ಕರೆತರಲಾಗಿತ್ತು. 2015ರ ಆಗಸ್ಟ್ 14ರಂದು ಬನ್ನಂಜೆ ರಾಜಾನನ್ನು ಕರೆತಂದು ಬೆಳಗಾವಿ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಸಾಕ್ಷ್ಯ ನುಡಿದಿದ್ದ ಅಣ್ಣಾಮಲೈ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ 2021ರ ಡಿಸೆಂಬರ್‌ 21ರಂದು ಸಾಕ್ಷ್ಯ ನುಡಿದಿದ್ದರು. ಪೊಲೀಸ್‌ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಅದಕ್ಕೂ ಮುನ್ನ ನಾಯಕ್‌ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ‌ಅಧಿಕಾರಿಗಳಾದ ಭಾಸ್ಕರ್ ರಾವ್ ಸೇರಿದಂತೆ ಒಟ್ಟು 210 ಮಂದಿ ಸಾಕ್ಷ್ಯ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ ಜಿ ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಶಿವಪ್ರಸಾದ್‌ ಆಳ್ವ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com