NCDRC  
ಸುದ್ದಿಗಳು

ಕ್ಯಾನ್ಸರ್‌ ಎಂದು ತಪ್ಪಾಗಿ ಪರಿಗಣಿಸಿ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ: ಆಸ್ಪತ್ರೆ ಹೊಣೆ ಎಂದ ಎನ್‌ಸಿಡಿಆರ್‌ಸಿ

ತಾತ್ಕಾಲಿಕ ಪೆಥಾಲಜಿ ವರದಿಯನ್ನಷ್ಟೇ ಆಧರಿಸಿ, ದೃಢೀಕರಣ ವೈದ್ಯಕೀಯ ಪರೀಕ್ಷೆ ನಡೆಸದೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿ ಮಹಿಳೆ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Bar & Bench

ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಧಿಯಾನದ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಹೊಣೆಗಾರರು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ತೀರ್ಪು ನೀಡಿದೆ. ವೈದ್ಯಕೀಯ ರೋಗ ನಿರ್ಣಯ ತಪಾಸಣೆಯಿಂದ ಪೂರ್ಣಪ್ರಮಾಣದಲ್ಲಿ ದೃಢೀಕರಿಸುವುದಕ್ಕೂ ಮುನ್ನವೇ ಮಹಿಳೆಯೊಬ್ಬರಿಗೆ ಗಂಭೀರ ಮುಖ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದ ಪ್ರಕರಣ ಇದಾಗಿದೆ [ಕನ್ವಲ್‌ಪ್ರೀತ್‌ ಕೌರ್‌ ಮತ್ತು ದಯಾನಂದ ವೈದ್ಯಕೀಯ ಕಾಲೇಜು ಇನ್ನಿತರರ ನಡುವಣ ಪ್ರಕರಣ].

2014 ರ ಜುಲೈನಲ್ಲಿ ದಂತವೈದ್ಯೆ ಡಾ. ಕನ್ವಲ್‌ ಪ್ರೀತ್ ಕೌರ್ ಅವರ ಬಲಭಾಗದ ಗಲ್ಲದ ಮೇಲೆ ಉಂಟಾದ ಚರ್ಮ ಸಂಬಂಧಿತ ಸಮಸ್ಯೆಯ ಕುರಿತು ವೈದ್ಯರನ್ನು ಸಂಪರ್ಕಿಸಿದ್ದರು. ಈ ಕುರಿತು ಬಯಾಪ್ಸಿ ನಡೆಸಲಾಗಿತ್ತು.

ಬಯಾಪ್ಸಿ ಮಾದರಿಯನ್ನು ರೋಗ ಅಧ್ಯಯನಕ್ಕಾಗಿ ದಯಾನಂದ ಮೆಡಿಕಲ್ ಕಾಲೇಜ್‌ಗೆ ಕಳುಹಿಸಲಾಗಿತ್ತು. 2014ರ ಆಗಸ್ಟ್ 2ರಂದು ನೀಡಿದ ರೋಗ ಅಧ್ಯಯನ ವರದಿಯಲ್ಲಿ, ಚರ್ಮದ ಕ್ಯಾನ್ಸರ್ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ವರದಿಯಲ್ಲಿ ಹೆಚ್ಚಿನ ದೃಢೀಕರಣ ಪರೀಕ್ಷೆಗಳು ಅಗತ್ಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ಇಷ್ಟಾದರೂ, ಯಾವುದೇ ಅಂತಿಮ ದೃಢೀಕರಣವಿಲ್ಲದೇ ಆಸ್ಪತ್ರೆ 2014ರ ಆಗಸ್ಟ್ 7ರಂದು ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿತ್ತು.

ಡಾ. ಕೌರ್ ಅವರ ಮುಖದ ಮೇಲೆ ಇದ್ದ ಚರ್ಮ ಸಂಬಂಧಿತ ಸಮಸ್ಯೆಯನ್ನಿ ಕ್ಯಾನ್ಸರ್ ಎಂದು ಶಂಕಿಸಿ, ಅಗತ್ಯ ದೃಢೀಕರಣ ಪರೀಕ್ಷೆ ನಡೆಸದೆ ವೈದ್ಯರು ತರಾತುರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು. ಇದರಿಂದ ಅವರ ಮುಖದ ಭಾಗ, ನರ ಹಾಗೂ ಸ್ನಾಯುಗಳಿಗೆ ಶಾಶ್ವತ ಹಾನಿಯಾಗಿದ್ದು, ನಗಲು, ಕಣ್ಣು ಮಿಟಕಿಸಲು ತೊಂದರೆ ಉಂಟಾಯಿತು. ಮುಂದೆ ಏಮ್ಸ್ ಸೇರಿದಂತೆ ತಜ್ಞರು ನೀಡಿದ ವರದಿಗಳು ಶಸ್ತ್ರಚಿಕಿತ್ಸೆ ಅಗತ್ಯವಿರಲಿಲ್ಲ ಎಂದು ತಿಳಿಸಿದವು, ಏಕೆಂದರೆ ಅದು ಕ್ಯಾನ್ಸರ್ ಲಕ್ಷಣವಿಲ್ಲದ ಚರ್ಮ ತೊಂದರೆ ಆಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯೆ ಕೌರ್‌ ಅವರು ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋಗಿದ್ದರು. ರಾಜ್ಯ ಆಯೋಗವು ಆಸ್ಪತ್ರೆ ಮತ್ತು ವೈದ್ಯರ ನಿರ್ಲಕ್ಷ್ಯವನ್ನು ಎತ್ತಿ ಹಿಡಿದು ಡಾ. ಕೌರ್‌ ಅವರಿಗೆ ಪರಿಹಾರ ನೀಡಿತ್ತು. ಇದರ ಮೇಲೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು.

ಅಂತಿಮವಾಗಿ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ರಾಜ್ಯ ಆಯೋಗದ ತೀರ್ಪನ್ನು ಎತ್ತಿಹಿಡಿದು ವೈದ್ಯಕೀಯ ನಿರ್ಲಕ್ಷ್ಯ ನಡೆದಿದೆ ಎಂದು ದೃಢಪಡಿಸಿತು. ಆದರೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ನಿರಾಕರಿಸಿತು. ₹55 ಲಕ್ಷ ಪರಿಹಾರದಲ್ಲಿ ₹45 ಲಕ್ಷವನ್ನು ಆಸ್ಪತ್ರೆ ಮತ್ತು ಶಸ್ತ್ರಚಿಕಿತ್ಸಕರಿಂದ ವಸೂಲಿ ಮಾಡುವಂತೆ ಹಾಗೂ ₹10 ಲಕ್ಷವನ್ನು ರೋಗ ಅಧ್ಯಯನ ಸಂಸ್ಥೆ ಪಾವತಿಸಬೇಕು ಎಂದು ಆದೇಶಿಸಿದೆ.

ಡಾ. ಕೌರ್ ಹೆಚ್ಚುವರಿಕ್ಕಾಗಿ ಮನವಿ ಮಾಡಿದರೂ ಶಸ್ತ್ರಚಿಕಿತ್ಸೆಗೆ ಅವರು ಒಪ್ಪಿಗೆ ನೀಡಿದ್ದುದರಿಂದ ಹೆಚ್ಚುವರಿ ಪರಿಹಾರಕ್ಕೆ ಅರ್ಹರಲ್ಲ ಎಂದು ಆಯೋಗ ತೀರ್ಮಾನಿಸಿದೆ. ಆದರೆ ಮಾನಸಿಕ ಮತ್ತು ದೈಹಿಕ ಆಘಾತವನ್ನು ಪರಿಗಣಿಸಿ, ದಾವೆ ವೆಚ್ಚವನ್ನು ₹55,000 ದ ಬದಲು ₹5 ಲಕ್ಷಕ್ಕೆ ಹೆಚ್ಚಿಸಿದೆ. ಇದೇ ವೇಳೆ ವಿಮೆ ಕಂಪನಿಗಳ ಹೊಣೆಗಾರಿಕೆ ತಮ್ಮ ಪಾಲಿಸಿಗಳ ಮಿತಿಯೊಳಗೆ ಮಾತ್ರ ಅನ್ವಯಿಸುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.