ಹದಿಮೂರು ವರ್ಷಗಳ ಹಿಂದೆ ಅಂದರೆ 2010ರಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಹಾಗೂ ಆಕೆಯ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಕುಟುಂಬ ಸದಸ್ಯರಿಗೆ ₹1.6 ಕೋಟಿ ಪರಿಹಾರ ನೀಡುವಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದೆಹಲಿಯ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಇತ್ತೀಚೆಗೆ ಆದೇಶಿಸಿದೆ.
ʼವೈದ್ಯಕೀಯ ನಿರ್ಲಕ್ಷ್ಯʼ ಮತ್ತು ʼಅಸಮರ್ಪಕತೆʼಯಿಂದಾಗಿ ಎರಡು ಅಮೂಲ್ಯ ಜೀವಗಳು ಸಾವನ್ನಪ್ಪಿರುವುದಕ್ಕೆ ಎನ್‌ಸಿಡಿಆರ್‌ಸಿ ಕಲಾಪದ ಅಧ್ಯಕ್ಷತೆ ವಹಿಸಿದ್ದ ಸದಸ್ಯ ಡಾ. ಎಸ್ ಎಂ ಕಾಂತಿಕರ್ ಹಾಗೂ ಸದಸ್ಯ ಬಿನೋಯ್ ಕುಮಾರ್ ಮೇ 23ರಂದು ನೀಡಿದ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರಕರಣದ ವಿಲಕ್ಷಣತೆಯನ್ನು ಗಮನಿಸಿ, ಆತ್ಯಂತಿಕ ನ್ಯಾಯ ದೊರಕಿಸಿಕೊಡಲು ₹1.6 ಕೋಟಿ ಮೊತ್ತದ ಪರಿಹಾರ ದೊರಕಿಸಿಕೊಡುವುದು ನ್ಯಾಯಯುತ ಮತ್ತು ಸಮರ್ಪಕವಾಗಿರುತ್ತದೆ” ಎಂದು ವೇದಿಕೆ ಹೇಳಿದೆ.
ಪರಿಹಾರ ಮೊತ್ತದಲ್ಲಿ ಆಸ್ಪತ್ರೆ ₹1.5 ಕೋಟಿ ಮೊತ್ತವನ್ನು ನೀಡಬೇಕು. ಉಳಿದ ₹10 ಲಕ್ಷ ರೂಪಾಯಿಗಳನ್ನು ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅರವಳಿಕೆ ತಜ್ಞರು ನೀಡಬೇಕು ಎಂದು ಅದು ಸೂಚಿಸಿದೆ. ಆದರೆ ಪ್ರಸೂತಿ ತಜ್ಞರಿಂದ ಯಾವುದೇ ಲೋಪ ಸಂಭವಿಸಿಲ್ಲ ಎಂದು ತಿಳಿಸಿದ ವೇದಿಕೆ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಏಪ್ರಿಲ್ 16, 2010ರಲ್ಲಿ ಮೂವತ್ತೈದು ವರ್ಷದ ಮಹಿಳೆ ಕಪಾಲಿ ಪತ್ನೆ ಹಾಗೂ ಆಕೆಯ ಇನ್ನೂ ಹುಟ್ಟದ ಮಗು ಸಾವನ್ನಪ್ಪಿರುವುದಾಗಿ ಬೆಂಗಳೂರಿನ ಕೋಲ್ಸ್ ಪಾರ್ಕ್ ಬಳಿ ಇರುವ ಸಂತೋಷ್ ಆಸ್ಪತ್ರೆ ಘೋಷಿಸಿತು.
ಆದರೆ ಈ ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಆಗಿದೆ. ಆಪರೇಷನ್ ಟೇಬಲ್‌ನಿಂದ ತನ್ನ ಪತ್ನಿ ಬಿದ್ದು ಹೆಮೋರೇಜಿಕ್ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ದೂರಿ ಮೃತ ಮಹಿಳೆ ಕಪಾಲಿ ಅವರ ಪತಿ ಪರೀಕ್ಷಿತ್ ದಲಾಲ್ ಅವರು ₹ 24,91,30,000/- (ಸುಮಾರು 25 ಕೋಟಿ) ಪರಿಹಾರ ಕೋರಿ ಗ್ರಾಹಕರ ಆಯೋಗದ ಮೊರೆ ಹೋದರು.
ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿತು. ಅರವಳಿಕೆ ಔಷಧ ಸೋಡಿಯಂ ಪೆಂಟಥಾಲ್‌ಗೆ ತೀವ್ರವಾದ ಅನಾಪಿಲುಕ್ಟಿಕ್ ರಿಯಾಕ್ಷನ್‌ನಿಂದಾಗಿ ಹೃದಯ ಸ್ತಂಭನ ಉಂಟಾಗಿ ಗರ್ಭಿಣಿ ಸಾವನ್ನಪ್ಪಿದರು ಎಂದು ಅದು ಸಮರ್ಥಿಸಿಕೊಂಡಿತು.
ಆದರೆ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್‌ನಿಂದಾಗಿ ಸಾವು ಸಂಭವಿಸಿದೆ ಎಂಬ ಆಸ್ಪತ್ರೆಯ ವಾದಕ್ಕೆ ಗ್ರಾಹಕರ ವೇದಿಕೆ ಅಸಮ್ಮತಿ ಸೂಚಿಸಿದೆ. “…ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಆಗಿದ್ದರೆ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತಸ್ರಾವ ಉಂಟಾಗಿದ್ದು ಏಕೆ? ಗರ್ಭಿಣಿ ಬಿದ್ದದ್ದರಿಂದ ಇಲ್ಲವೇ ಬಲವಾದ ಗಾಯ ಆಗಿರುವುದರಿಂದ ರಕ್ತಸ್ರಾವ ಸಂಭವಿಸಿರಬಹುದು” ಎಂಬುದಾಗಿ ವೇದಿಕೆ ಅಭಿಪ್ರಾಯಪಟ್ಟಿದೆ.
ಒಂದು ವೇಳೆ ಪತಿ ಮರುಮದುವೆಯಾಗಿದ್ದರೆ ಪರಿಹಾರದ ಒಟ್ಟು ಮೊತ್ತವನ್ನು ಮೃತ ಮಹಿಳೆಯ ಪೋಷಕರಿಗೆ ನೀಡಬೇಕು ಎಂದು ಕೂಡ ಎನ್‌ಸಿಡಿಆರ್‌ಸಿ ನಿರ್ದೇಶಿಸಿದೆ. ತಾನು ಆದೇಶ ಹೊರಡಿಸಿದ ದಿನದಿಂದ ಆರು ವಾರದೊಳಗೆ ಆಸ್ಪತ್ರೆ ಮತ್ತು ಅರವಳಿಕೆ ತಜ್ಞರು ಪರಿಹಾರ ಧನ ನೀಡಬೇಕು. ತಪ್ಪಿದಲ್ಲಿ ಆ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ 7ರಷ್ಟು ಬಡ್ಡಿಯೊಂದಿಗೆ ಪರಿಹಾರ ಮೊತ್ತ ಪಾವತಿಸಬೇಕಾಗುತ್ತದೆ ಎಂದು ವೇದಿಕೆ ಸೂಚಿಸಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: