Nclat Chennai and Adani Power 
ಸುದ್ದಿಗಳು

ಅದಾನಿ ನೇತೃತ್ವದ ಒಕ್ಕೂಟದಿಂದ ಕೋಸ್ಟಲ್‌ ಎನರ್ಜೆನ್‌ ಸ್ವಾದೀನವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಎನ್‌ಸಿಎಲ್‌ಎಟಿ

ಸ್ವಾದೀನಪಡಿಸಿಕೊಳ್ಳುತ್ತಿರುವ ಒಕ್ಕೂಟದ ಭಾಗವಾಗಿರುವ ಡಿಎಐಟಿ ನೆಪಮಾತ್ರದ ಕಂಪೆನಿಯಾಗಿದ್ದು ಅದಾನಿ ಪವರ್‌ನ ಭಾಗವೇ ಆಗಿದೆ ಎಂದು ಮೇಲ್ಮನವಿದಾರರು ವಾದಿಸಿದ್ದಾರೆ.

Bar & Bench

ಅದಾನಿ ಪವರ್‌ ನೇತೃತ್ವದ ಒಕ್ಕೂಟವು ವಿದ್ಯುಚ್ಛಕ್ತಿ ಉತ್ಪಾದನಾ ಕಂಪನಿ ಕೋಸ್ಟಲ್‌ ಎನರ್ಜೆನ್‌ನ ಸ್ವಾದೀನ ಪ್ರಕ್ರಿಯೆಯನ್ನು ಈಚೆಗೆ ಚೆನ್ನೈನ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣವು ತಡೆಹಿಡಿದಿದೆ.

ಮೇಲ್ನೋಟಕ್ಕೆ ಪ್ರಕ್ರಿಯೆ ಪಾಲಿಸಿಲ್ಲ ಎಂದು ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಂಗ ಸದಸ್ಯ ಶರದ್‌ ಕುಮಾರ್‌ ಶರ್ಮಾ ಮತ್ತು ತಾಂತ್ರಿಕ ಸದಸ್ಯ ಜಿತೇಂದ್ರನಾಥ್‌ ಸ್ವೈನ್‌ ಅವರ ಪೀಠ ಆದೇಶಿಸಿದೆ.

Justice Sharad Kumar Sharma and Jatindranath Swain

ಪರಿಸ್ಥಿತಿ ಹೀಗಿರುವಾಗ “ಒಕ್ಕೂಟದ ಸದಸ್ಯರು ಯಾವುದೇ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು” ಎಂದು ಎನ್‌ಸಿಎಲ್‌ಎಟಿ ಹೇಳಿದೆ.

ಮುಂದಿನ ವಿಚಾರಣೆ ಸೆಪ್ಟೆಂಬರ್‌ 18ರವರೆಗೆ ಮಧ್ಯಂತರ ವೃತ್ತಿಪರ ಪರಿಹಾರಕಾರರು ತಮಿಳುನಾಡಿನ ತೂತುಕುಡಿಯಲ್ಲಿನ ಕೋಸ್ಟಲ್‌ ಎನರ್ಜೆನ್‌ ವಿದ್ಯುತ್‌ ಘಟಕವನ್ನು ನಿರ್ವಹಿಸುತ್ತಾರೆ ಎಂದು ಮೇಲ್ಮನವಿ ನ್ಯಾಯಾಧಿಕರಣ ಆದೇಶಿಸಿದೆ. ಈ ಅವಧಿಯಲ್ಲಿ ಬರುವ ಹಣವನ್ನು ಮೇಲುಸ್ತುವಾರಿ ನಿರ್ವಹಣೆಯಲ್ಲಿರುವ ಮೂರನೇ ಖಾತೆಯಲ್ಲಿ ಇಡಲಾಗುವುದು ಎಂದು ಮೇಲ್ಮನವಿ ನ್ಯಾಯಾಧಿಕರಣ ಹೇಳಿದೆ.

ಕೋಸ್ಟಲ್‌ ಎನೆರ್ಜೆನ್‌ನ ಅಮಾನತುಗೊಂಡಿರುವ ನಿರ್ದೇಶಕ ಅಹ್ಮದ್‌ ಬುಹಾರಿ, ಕಂಪೆನಿಯ ಷೇರು ಹೊಂದಿರುವ ಪ್ರೀಶಿಯಸ್‌ ಎನರ್ಜಿ ಹೋಲ್ಡಿಂಗ್ಸ್‌ ಮತ್ತು ಮುತೈರ ಎನರ್ಜಿ ಹೋಲ್ಡಿಂಗ್ಸ್‌ ಸಲ್ಲಿಸಿದ್ದ ಅರ್ಜಿಗಳನ್ನು ಎನ್‌ಸಿಎಲ್‌ಎಟಿ ನಡೆಸಿತು.

ಖಾಸಗಿ ಆಸ್ತಿ ನಿರ್ಹಹಣಾ ಕಂಪೆನಿ ಡಿಕಿ ಅಲ್ಟರ್‌ನೇಟಿವ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ ಮತ್ತು ಅದಾನಿ ಪವರ್‌ಗೆ ಕೋಸ್ಟಲ್ ಎನರ್ಜೆನ್‌ನ 1,200 ಮೆಗಾ ವ್ಯಾಟ್‌ ಕಲ್ಲಿದ್ದಲು ಥರ್ಮಲ್‌ ವಿದ್ಯುತ್‌ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ (ಎನ್‌ಸಿಎಲ್‌ಟಿ) ಆದೇಶವನ್ನು ಮೇಲ್ಮನವಿದಾರರು ಪ್ರಶ್ನಿಸಿದ್ದರು.

ತಮಿಳುನಾಡು ಸರ್ಕಾರವು ವಿದ್ಯುತ್‌ ಕಂಪನಿಯಾದ ಕೋಸ್ಟಲ್‌ ಎನರ್ಜೆನ್‌ ವಿರುದ್ಧ ದಿವಾಳಿ ಅರ್ಜಿ ಸಲ್ಲಿಸಿದ ಬಳಿಕ ಎನ್‌ಸಿಎಲ್‌ಟಿಯು ದಿವಾಳಿ ಪ್ರಕ್ರಿಯೆ ಆರಂಭಿಸಿ, ಅದರ ಭಾಗವಾಗಿ ಮಧ್ಯಂತರ ಪರಿಹಾರ ವೃತ್ತಿಪರರನ್ನು ನೇಮಕ ಮಾಡಿತ್ತು. ಆನಂತರ ಅದಾನಿ ನೇತೃತ್ವದ ಒಕ್ಕೂಟವು ₹3,335.52 ಕೋಟಿ ಪರಿಹಾರ ಯೋಜನೆ ನೀಡಿತ್ತು. ಅದಕ್ಕೆ ಎನ್‌ಸಿಎಲ್‌ಟಿ ಆಗಸ್ಟ್‌ 30ರಂದು ಒಪ್ಪಿಗೆ ನೀಡಿತ್ತು.

ನಿರ್ದೇಶಕರನ್ನು ಅಮಾನತುಗೊಳಿಸಿದ ಕೋಸ್ಟಲ್‌ ಎನರ್ಜೆನ್‌, ಎನ್‌ಸಿಎಲ್‌ಎಟಿಯಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಸ್ವಾದೀನ ಪ್ರಕ್ರಿಯೆ ಪ್ರಶ್ನಿಸಿದೆ. ಸ್ವಾದೀನ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಒಕ್ಕೂಟದಲ್ಲಿನ ಡಿಎಐಟಿಯು ನೆಪಮಾತ್ರ ಸಂಸ್ಥೆಯಾಗಿದ್ದು ಅದು ಅದಾನಿ ಪವರ್‌ ಭಾಗವೇ ಆಗಿದೆ ಎಂದು ಆರೋಪಿಸಿದೆ.