ವಾಟ್ಸಾಪ್ ಗೌಪ್ಯತಾ ನೀತಿ ಸಂಬಂಧ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಗೆ ವಿಧಿಸಿರುವ ₹213.14 ಕೋಟಿ ದಂಡದ ಆದೇಶ ಪ್ರಶ್ನಿಸಿ ಮೆಟಾ ಸಲ್ಲಿಸಿದ್ದ ಅರ್ಜಿ ಸಂಬಂಧ ಮುಂದಿನ ವಾರ ತೀರ್ಪು ನೀಡುವುದಾಗಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಗುರುವಾರ ತಿಳಿಸಿದೆ.
"ನಾವು ಕಕ್ಷಿದಾರರ ವಾದ ಆಲಿಸಿದ್ದೇವೆ. ಕಕ್ಷಿದಾರರ ವಾದ ಪರಿಗಣಿಸುವ ಅಗತ್ಯವಿದೆ ಎಂದು ಕಂಡುಕೊಂಡಿದ್ದೇವೆ. ನಾವು ಎರಡೂ ಮೇಲ್ಮನವಿಗಳ ವಿಚಾರಣೆಗೆ ಒಪ್ಪಿಕೊಂಡಿದ್ದೇವೆ. ಮುಂದಿನ ಗುರುವಾರ ಮಧ್ಯಂತರ ಪರಿಹಾರ ಕುರಿತು ಆದೇಶ ನೀಡಲಾಗುವುದು" ಎಂದು ಎನ್‌ಸಿಎಲ್ಎಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ತಾಂತ್ರಿಕ ಸದಸ್ಯ ಅರುಣ್ ಬರೋಕಾ ಅವರು ತಿಳಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ಮೆಟಾ ಮತ್ತು ವಾಟ್ಸಾಪ್ ಪರವಾಗಿ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ , ಪ್ರಕರಣ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ವ್ಯಾಪ್ತಿಗೆ ಒಳಪಟ್ಟಿದ್ದರೂ ವಾಟ್ಸಾಪ್‌ನ ಗೌಪ್ಯತೆ ನೀತಿ ಕುರಿತು ತೀರ್ಪು ನೀಡಿ ಸಿಸಿಐ ತನ್ನ ಅಧಿಕಾರ ವ್ಯಾಪ್ತಿ ಮೀರಿದೆ ಎಂದು ಪ್ರತಿಪಾದಿಸಿದರು.
ಇದು ಹಲವಾರು ಆಯಾಮಗಳಲ್ಲಿ ಸಂಪೂರ್ಣ ದೂರಗಾಮಿ ಪರಿಣಾಮ ಬೀರಲಿದೆ. ಸಂಸ್ಥೆಯ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಸಿಸಿಐ ತೀರ್ಪಿತ್ತಿದೆ. ಪ್ರಕರಣ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಎದುರು ಮುಂದೆ ಇದೆ. ಅದನ್ನು ವ್ಯವಹರಿಸಲು ಸಿಸಿಐಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಅವರು ವಿವರಿಸಿದರು.
ಆದೇಶವು ಮೂಲಭೂತವಾಗಿ ವಾಟ್ಸಾಪ್‌ನ ವ್ಯವಹಾರ ಮಾದರಿಯನ್ನು ನಾಶಪಡಿಸುತ್ತದೆ ಎಂದು ಸಿಬಲ್ ಪ್ರತಿಪಾದಿಸಿದರು. ಭಾರತದ ದತ್ತಾಂಶ ಗೌಪ್ಯತೆ ಕಾನೂನು 202ನೇ ಸಾಲಿನ ಮಧ್ಯಭಾಗದಲ್ಲಿ ಜಾರಿಗೆ ಬರಲಿದ್ದು ವ್ಯಾಜ್ಯ ಗೌಪ್ಯತಾ ಕಾನೂನಿನಿಂದ ನಿಯಂತ್ರಿಸಲ್ಪಡುವುದರಿಂದ ಸಿಸಿಐ ಆದೇಶ ಅರ್ಥಹೀನ ಎಂದು ಅವರು ವಾದಿಸಿದರು.
ರೋಹಟಗಿ ವಾದ ಮಂಡಿಸಿ " ವಾಟ್ಸಾಪ್ ಉಚಿತ. ಎಲ್ಲರೂ ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಯಾರೂ ಉಚಿತ ಮಾದರಿಯಲ್ಲಿ ಬದುಕಲು ಸಾಧ್ಯವಿಲ್ಲ. ಇಂದು, ಪ್ರಪಂಚದ ಯಾವುದೇ ಭಾಗದಲ್ಲಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿದರೆ,ನೀವು ಎಲ್ಲಿದ್ದೀರಿ ಎಂಬುದು ಕ್ರೆಡಿಟ್ ಕಂಪೆನಿಗೆ ತಿಳಿಯುತ್ತದೆ. ಇದು ಕೇವಲ 2016ರ ನೀತಿಯ ನವೀಕೃತ ಭಾಗವಾಗಿದೆ. ಈ ಹಿಂದೆ ಮಧ್ಯಂತರ ಅರ್ಜಿಯನ್ನು ಸಂವಿಧಾನ ಪೀಠದ ಮುಂದೆ ಸಲ್ಲಿಸಿದ್ದಾಗ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ" ಎಂದರು.
ಸಿಸಿಐ ಪರ ವಾದ ಮಂಡಿಸಿದ ವಕೀಲ ಸಮರ್ ಬನ್ಸಾಲ್, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಮತ್ತು ಸಿಸಿಐ ನಡೆಸಿದ ತನಿಖೆಯ ನಡುವೆ ಯಾವುದೇ ರೀತಿಯ ತಳಕು ಹಾಕಿಕೊಂಡಿರುವಿಕೆ ಇಲ್ಲ ಎಂದು ವಾದಿಸಿದರು
ವಾಟ್ಸಾಪ್ ಗೌಪ್ಯತಾ ನೀತಿ- 2021ನ್ನು ಜಾರಿಗೆ ತರುವ ಮೂಲಕ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ಮೆಟಾಗೆ ಸಿಸಿಐ ₹213.14 ಕೋಟಿ ದಂಡ ವಿಧಿಸಿತ್ತು. ಕೆಲ ನಿರ್ಬಂಧ ಆದೇಶಗಳನ್ನು ಮೆಟಾ ಮತ್ತು ವಾಟ್ಸಾಪ್‌ಗೆ ನೀಡಿದ ಸಿಸಿಐ ನಿರ್ದಿಷ್ಟ ನಡವಳಿಕೆ ಪರಿಹಾರಗಳನ್ನು ನಿಗದಿತ ಗಡುವಿನೊಳಗೆ ಜಾರಿಗೊಳಿಸಲು ನಿರ್ದೇಶಿಸಿತ್ತು.