ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ನವೋದ್ಯಮವಾದ ಬೈಜೂಸ್ ಆಡಳಿತಕ್ಕೊಳಪಟ್ಟಿದ್ದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ (ಎಇಎಸ್‌ಎಲ್) ವಿಶೇಷ ಸಾಮಾನ್ಯ ಸಭೆಗೆ ತಾತ್ಕಾಲಿಕವಾಗಿ ತಡೆ ನೀಡುವಂತೆ ಬೈಜೂಸ್‌ಗೆ ಸಾಲನೀಡಿದ್ದ ಅಂತಾರಾಷ್ಟ್ರೀಯ ಸಾಲದಾತ ಸಂಸ್ಥೆ ಗ್ಲಾಸ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ) ಚೆನ್ನೈ ಪೀಠ ಮಂಗಳವಾರ ತಿರಸ್ಕರಿಸಿದೆ [ಗ್ಲಾಸ್ ಟ್ರಸ್ಟ್ ಮತ್ತು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ನಡುವಣ ಪ್ರಕರಣ] .
ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಶೇಷಸಾಯಿ ಮತ್ತು ತಾಂತ್ರಿಕ ಸದಸ್ಯ ಜತೀಂದ್ರನಾಥ್ ಸ್ವೈನ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಬಾಕಿ ಇರುವ ಮೇಲ್ಮನವಿಯ ಸೀಮಿತ ವ್ಯಾಪ್ತಿ ಮೀರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಈ ಮಧ್ಯಂತರ ಹಂತದಲ್ಲಿ ಎಇಎಸ್‌ಎಲ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಅರ್ಜಿಯ ಅಂತಿಮ ವಿಚಾರಣೆ ನವೆಂಬರ್ 7ರಂದು ನಡೆಯಲಿದೆ.
ಇದಕ್ಕೂ ಮುನ್ನ ಅಕ್ಟೋಬರ್ 17ರಂದು ಬೈಜೂಸ್‌ನ ರೆಸಲ್ಯೂಷನ್ ಪ್ರೊಫೆಷನಲ್ (ಋಣಭಾರ ಪರಿಹಾರ ವೃತ್ತಿಪರರು) ಸಲ್ಲಿಸಿದ್ದ ಮನವಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಬೆಂಗಳೂರಿನ ಎನ್‌ಸಿಎಲ್‌ಟಿ ಕೂಡ ನಿರಾಕರಿಸಿತ್ತು.
ನ್ಯಾಯಾಂಗ ಸದಸ್ಯ ಸುನಿಲ್ ಕುಮಾರ್ ಅಗರ್‌ವಾಲ್ ಮತ್ತು ತಾಂತ್ರಿಕ ಸದಸ್ಯ ರಾಧಾಕೃಷ್ಣ ಶ್ರೀಪಾದ ಅವರಿದ್ದ ಎನ್‌ಸಿಎಲ್‌ಟಿ ಬೆಂಗಳೂರು ಪೀಠವು, ವಿಶೇಷ ಸಾಮಾನ್ಯ ಸಭೆಗೆ ಮಧ್ಯಂತರ ತಡೆಯಾಜ್ಞೆ ಕೋರಿ ಬೈಜೂಸ್ ಮಾತೃಸಂಸ್ಥೆ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು.
ಸಂಘದ ವಿಧಿಗಳ (ಎಒಎ) ಭಾಗ ಬಿಯನ್ನು ಉಲ್ಲಂಘಿಸಿ ಎಇಎಸ್‌ಎಲ್ ಸಭೆ ನಡೆಸುತ್ತಿದೆ. ಸಭೆ ನಡೆಸಲು ಮುಂದಾಗುವ ಮೂಲಕ ತನ್ನ ಭಾಗವಹಿಸುವಿಕೆಯ ಹಕ್ಕು ಮತ್ತು ವಿಟೋ ಅಧಿಕಾರವನ್ನು ಉಲ್ಲಂಘಿಸಲಾಗಿದೆ. ಎನ್‌ಸಿಎಲ್‌ಟಿ ಆದೇಶದ ಹೊರತಾಗಿಯೂ, ಎಇಎಸ್‌ಎಲ್ ಮಂಡಳಿಯು ಬೈಜುವಿನ ಷೇರುಗಳನ್ನು 25.75% ರಿಂದ 5% ಕ್ಕಿಂತ ಕಡಿಮೆಗೆ ಇಳಿಸಲು ಪ್ರಯತ್ನಿಸುತ್ತಿದೆ ಎಂದು ಬೈಜೂಸ್ ದೂರಿತ್ತು. ಆದರೆ ಎನ್‌ಸಿಎಲ್‌ಟಿ ಈ ವಾದ ತಿರಸ್ಕರಿಸಿತ್ತು.
ಸಭೆಯಲ್ಲಿ ಓರ್ವ ಪಾಲುದಾರ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದ ಮಾತ್ರಕ್ಕೆ ಹಕ್ಕುಗಳ ವಿಚಾರದಲ್ಲಿ ಅಸಮಾನತೆ ಉಂಟಾಗಿದೆ ಎಂದು ಭಾವಿಸಲಾಗದು. ಅಂತಹ ನಿಲುವನ್ನು ಒಪ್ಪಿಕೊಂಡರೆ ಕಂಪನಿಯ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ವಾಯತ್ತತೆಗೆ ಧಕ್ಕೆ ಒದಗುತ್ತದೆ ಎಂದು ಅದು ಹೇಳಿತ್ತು.