Jet Airways 
ಸುದ್ದಿಗಳು

ಜಲನ್-ಕಲ್ರಾಕ್ ಒಕ್ಕೂಟದ ಸುಪರ್ದಿಗೆ ಜೆಟ್ ಏರ್‌ವೇಸ್‌: ಎನ್‌ಸಿಎಲ್‌ಟಿ ಅನುಮತಿ

ಸಾಲದಾತರು ಮತ್ತು ಉದ್ಯೋಗಿಗಳಿಗೆ ಹಣ ಪಾವತಿಸಲು ನ್ಯಾಯಮಂಡಳಿಯು ಒಕ್ಕೂಟಕ್ಕೆ ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಿತು.

Bar & Bench

ವಿಮಾನಯಾನ ಸಂಸ್ಥೆ ಜೆಟ್‌ಏರ್‌ವೇಸ್‌ ಸ್ವಾಧೀನ ಪಡಿಸಿಕೊಳ್ಳಲು ಮುರಾರಿ ಲಾಲ್ ಜಲನ್ ಮತ್ತು  ಫ್ಲೋರಿಯನ್ ಫ್ರಿಚ್ ಒಕ್ಕೂಟಕ್ಕೆ ಇತ್ತೀಚೆಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠ ಅನುಮತಿ ನೀಡಿದೆ [ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಟ್‌ ಏರ್‌ವೇಸ್‌ ಇಂಡಿಯಾ ಲಿಮಿಟೆಡ್‌ ನಡುವಣ ಪ್ರಕರಣ].

ಜೆಟ್ ಏರ್‌ವೇಸ್‌ಗೆ ಹಣ ಪಾವತಿಸಲು ಅದರ ನಿಯಂತ್ರಣ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳಲು ಹಾಗೂ ಅನುಮೋದಿತ ಪರಿಹಾರ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಪಿ ಎ ನ್ ದೇಶಮುಖ್ ಮತ್ತು ತಾಂತ್ರಿಕ ಸದಸ್ಯ ಶ್ಯಾಮ್ ಬಾಬು ಗೌತಮ್ ಅವರನ್ನೊಳಗೊಂಡ ನ್ಯಾಯಮಂಡಳಿ ಒಕ್ಕೂಟಕ್ಕೆ ಅವಕಾಶ ಮಾಡಿಕೊಟ್ಟಿತು.

ಸಾಲದಾತರು ಮತ್ತು ಉದ್ಯೋಗಿಗಳಿಗೆ ಹಣ ಪಾವತಿಸಲು ಒಕ್ಕೂಟಕ್ಕೆ ನ್ಯಾಯಮಂಡಳಿ ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಿತು. ಕಾನೂನು ಹಿತಾಸಕ್ತಿ ಮತ್ತು ಜೆಟ್ ಏರ್‌ವೇಸ್‌ ಆಸ್ತಿಗಳ ಗರಿಷ್ಠೀಕರಣ ಮತ್ತು ನಿರ್ಣಯದ ಪ್ರಾಥಮಿಕ ಗುರಿ ಸಾಧಿಸಲು ಹೀಗೆ ಮಾಡಲಾಗಿದೆ ಪೀಠ ಅಭಿಪ್ರಾಯಪಟ್ಟಿದೆ. ಇದನ್ನು ವಿರೋಧಿಸಿದ ಬ್ಯಾಂಕರ್‌ಗಳ ಒಕ್ಕೂಟ ಆದೇಶಕ್ಕೆ ಎರಡು ವಾರಗಳ ತಡೆ ನೀಡುವಂತೆ ಕೋರಿತಾದರೂ ನ್ಯಾಯಮಂಡಳಿ ಅದಕ್ಕೆ ಒಪ್ಪಲಿಲ್ಲ.  

ಬ್ಯಾಂಕ್‌ಗಳ ಒಕ್ಕೂಟ ಸೇರಿದಂತೆ ಸಾಲದಾತರಿಗೆ ಜೆಟ್ ಏರ್‌ವೇಸ್ ₹ 8,000 ಕೋಟಿಗೂ ಹೆಚ್ಚು ಹಣ ಪಾವತಿಸಬೇಕಿತ್ತು. ₹ 13,000 ಕೋಟಿಯಷ್ಟು ಸಂಚಿತ ನಷ್ಟ ಅನುಭವಿಸಿದ್ದ ಜೆಟ್‌ ಏರ್‌ವೇಸ್‌,  ₹ 10,000 ಕೋಟಿಗಿಂತ ಅಧಿಕ ಬಾಕಿ ಹಣ ಹಾಗೂ ಹಾಗೂ ₹ 3,000 ಕೋಟಿಗೂ ಅಧಿಕ ವೇತನ ಪಾವತಿಸಬೇಕಿತ್ತು.  

ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ ಮುಂಬೈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಸಾಲದಾತರ ಒಕ್ಕೂಟ 2019ರಲ್ಲಿ ಜೆಟ್‌ ಏರ್‌ವೇಸ್‌ ವಿರುದ್ಧ ಮುಂಬೈನ ಎನ್‌ಸಿಎಲ್‌ಟಿಯಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ದೂರು ದಾಖಲಿಸಿತ್ತು. ಹರಾಜಿನಲ್ಲಿ ಜೆಟ್‌ಏರ್‌ವೇಸ್‌ ಸಂಸ್ಥೆಯನ್ನು ಜಲನ್-ಕಲ್ರಾಕ್ ಒಕ್ಕೂಟ ಖರೀದಿಸಿತ್ತು.

ಒಕ್ಕೂಟ, ಮೇ 20, 2022ರಿಂದ ಜಾರಿಗೆ ಬಂದ ಅನುಮೋದಿತ ಪರಿಹಾರ ಯೋಜನೆ ಪ್ರಕಾರ ₹150 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿಗಳನ್ನು ಠೇವಣಿ ಇರಿಸಲಿದೆ. ಸಾಲದಾತರಿಗೆ ₹185 ಕೋಟಿ ನಗದು ಪಾವತಿ ಮಾಡಲಿದೆ. ಇದು ಇತರ ಪಾಲುದಾರರಿಗೆ  ₹ 1,375 ಕೋಟಿ ಮತ್ತು ಬಂಡವಾಳ ವೆಚ್ಚಕ್ಕಾಗಿ ₹ 900 ಕೋಟಿ ಹಣ ವಿನಿಯೋಗಿಸಲಿದೆ