ʼಕ್ರೈಂ ಇನ್ ಇಂಡಿಯಾ- 2022ʼ ವರದಿಯನ್ನು ಈಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ್ದು ಅದರ ಪ್ರಕಾರ 2022ನೇ ಸಾಲಿನಲ್ಲಿ ರಾಜ್ಯದಲ್ಲಿ ಮಹಿಳೆ ಮಕ್ಕಳು ವೃದ್ಧರ ವಿರುದ್ಧದ ದೌರ್ಜನ್ಯ ಪ್ರಕರಣ ಹೆಚ್ಚಳವಾಗಿದೆ. ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಹಾಗೂ ನಗರಗಳಲ್ಲಿ ಕರ್ನಾಟಕ ಹಾಗೂ ಬೆಂಗಳೂರು ಅಗ್ರಸ್ಥಾನದಲ್ಲಿವೆ.
ಎನ್‌ಸಿಆರ್‌ಬಿ 2022ರ ಜನವರಿಯಿಂದ ಡಿಸೆಂಬರ್‌ವರೆಗಿನ ಅಪರಾಧಗಳ ಮಾಹಿತಿಯನ್ನು ವರದಿಯಲ್ಲಿ ನೀಡಿದ್ದು ಅದು ಹೇಳುವಂತೆ ಕರ್ನಾಟಕದಲ್ಲಿ 2022 ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿದೆ. ಹೆಚ್ಚಿನ ಪ್ರಕರಣಗಳು ವೈಯಕ್ತಿಕ ದ್ವೇಷದಿಂದ ಭುಗಿಲೆದ್ದ ವಿವಾದಗಳಿಗೆ ಸಂಬಂಧಪಟ್ಟಿವೆ. ರಾಜ್ಯದಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ 2021ರಲ್ಲಿ 1,357ರಷ್ಟಿದ್ದರೆ ಕಳೆದ ವರ್ಷ 1,404 ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶ ರಾಜಸ್ಥಾನದಲ್ಲಿ ಹೆಚ್ಚಿನ ಕೊಲೆ ಪ್ರಕರಣಗಳು ವರದಿಯಾಗಿದ್ದು ಕರ್ನಾಟಕ ಎಂಟನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ 2022ರಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ 706 ಪ್ರಕರಣಗಳು ವಿವಾದಗಳಿಗೆ ಸಂಬಂಧಿಸಿದ್ದಾಗಿದ್ದು 353 ಪ್ರಕರಣಗಳಲ್ಲಿ ವೈಯಕ್ತಿಕ ದ್ವೇಷ ಅಥವಾ ದ್ವೇಷದ ಕಾರಣಗಳು ಪತ್ತೆಯಾಗಿವೆ. 108 ಪ್ರಕರಣಗಳು ಅಕ್ರಮ ಸಂಬಂಧದ ಕಾರಣಕ್ಕೆ ನಡೆದ ಕೊಲೆಗಳಾಗಿವೆ. 59 ಕೊಲೆಗಳು ಲಾಭದ ಉದ್ದೇಶಕ್ಕೆ ನಡೆದಿವೆ. ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ 44 ಕೊಲೆ ಮಾಡಲಾಗಿದೆ.
ಕರ್ನಾಟಕದಲ್ಲಿ ಕೊಲೆ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ 2.1 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆ ಪ್ರಮಾಣ 90.2ರಷ್ಟಿದೆ. ಕೊಲೆಯಾದವರಲ್ಲಿ ಹೆಚ್ಚಿನವರು ಪುರುಷರಾಗಿದ್ದು (1,007); 472 ಮಹಿಳೆಯರ ಸಂಖ್ಯೆ 472 ರಷ್ಟಿದೆ. ಮೂವರು ತೃತೀಯ ಲಿಂಗದ ವ್ಯಕ್ತಿಗಳು ಕೂಡ ಪ್ರಾಣ ತೆತ್ತಿದ್ದಾರೆ.
ರಾಜ್ಯದಲ್ಲೂ ಮಹಿಳಾ ವಿರೋಧಿ ಅಪರಾಧದಲ್ಲಿ ಹೆಚ್ಚಳ
ಮಹಿಳೆಯರ ವಿರುದ್ಧದ ಅಪರಾಧ ದೇಶದಲ್ಲಿ ಶೇ 4ರಷ್ಟು ಹೆಚ್ಚಳ ದಾಖಲಾಗಿದ್ದು ರಾಜ್ಯದಲ್ಲೂ ಅವರ ವಿರುದ್ಧದ ಅಪರಾಧದಲ್ಲಿ ಹೆಚ್ಚಳ ಕಂಡುಬಂದಿದೆ. 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 17,813 ಎಫ್‌ಐಆರ್‌ಗಳು ದಾಖಲಾಗಿದ್ದು, ಅದಕ್ಕೂ ಹಿಂದಿನ ವರ್ಷ 14,468 ಪ್ರಕರಣಗಳು ದಾಖಲಾಗಿದ್ದವು. ಆದರೆ ರಾಷ್ಟ್ರಮಟ್ಟದಲ್ಲಿ ಮಹಿಳಾ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದಂತೆ ಕರ್ನಾಟಕ 10ನೇ ಸ್ಥಾನದಲ್ಲಿದ್ದು ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನ ಮೊದಲ ಮೂರು ಸ್ಥಾನ ಪಡೆದಿವೆ.
ಭೀತಿ ಹುಟ್ಟಿಸುವ ಬೆಂಗಳೂರು
ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ಬೆಂಗಳೂರಿನಲ್ಲಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಈ ವಿಚಾರದಲ್ಲಿ ಅದು ದಕ್ಷಿಣ ಭಾರತದ ನಗರಗಳಲ್ಲೇ ಮೊದಲ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ 1,578 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಹಿರಿಯ ನಾಗರಿಕರ ಮೇಲೆ 458 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್ ಮತ್ತು ಚೆನ್ನೈ ನಂತರದ ಸ್ಥಾನದಲ್ಲಿವೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದ 19 ಪ್ರಮುಖ ನಗರಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸೈಬರ್ ಅಪರಾಧಗಳ ಸ್ವರ್ಗ
ಅತ್ಯಧಿಕ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ನಗರ ಎಂದು ಬೆಂಗಳೂರು ಕುಖ್ಯಾತಿ ಗಳಿಸಿದರೆ ಈ ಅಪರಾಧಕ್ಕೆ ಸಂಭಂಧಿಸಿದಂತೆ ದೇಶದಲ್ಲೇ ಕರ್ನಾಟಕ ಮುಂದಿದೆ.
ಸೈಬರ್ ಅಪರಾಧ ಹೆಚ್ಚು ನಡೆಯುತ್ತಿರುವ ದೇಶದ 19 ಮಹಾನಗರ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶದ ನಗರಗಳಾದ ಲಖನೌ ಮತ್ತು ಗಾಜಿಯಾಬಾದ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
2021ರಲ್ಲಿ ಬೆಂಗಳೂರಿನಲ್ಲಿ 6423 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ 2022ರಲ್ಲಿ 9940 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 2022ರಲ್ಲಿ 12,549 ಪ್ರಕರಣಗಳು ದಾಖಲಾಗಿ ಮುಂಚೂಣಿಯಲ್ಲಿದೆ.
[ವರದಿಯ ಪ್ರತಿಯನ್ನು ಇಲ್ಲಿ ಓದಿ]