ಸರ್ಕಾರ ಅಥವಾ ಅದರ ಅಂಗ ಸಂಸ್ಥೆಗಳು ದೇಶದ ಅರ್ಧಕ್ಕೂ ಹೆಚ್ಚು ಪ್ರಕರಣಗಳ ದಾವೆದಾರರಾಗಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೊಕದ್ದಮೆ ಹೂಡುವ ರೀತಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಆದ್ದರಿಂದ, ಮೊಕದ್ದಮೆ ಹೂಡುವ ಬದಲು ವಿವಾದಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಅವರು ಒತ್ತಾಯಿಸಿದರು.
ಭುವನೇಶ್ವರದಲ್ಲಿ ನಡೆದ 2025ನೇ ಸಾಲಿನ ರಾಷ್ಟ್ರೀಯ ಮಧ್ಯಸ್ಥಿಕೆ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸರ್ಕಾರಿ ಮೊಕದ್ದಮೆಗಳಲ್ಲಿ ಮಧ್ಯಸ್ಥಿಕೆ ಕುರಿತ ತಾಂತ್ರಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.
ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ಶೇ 46.78%ರಷ್ಟು ಪ್ರಕರಣಗಳು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಅವುಗಳ ಅಂಗಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದ್ದು ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನೇ ಅವಲಂಬಿಸುವ ಬದಲು ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಇತ್ಯರ್ಥಕ್ಕೆ ಮುಂದಾಗಬೇಕಿದೆ ಎಂದು ಅವರು ಹೇಳಿದರು.
ತಾವು ಕರ್ನಾಟಕದಲ್ಲಿ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡುತ್ತಿದ್ದಾಗ 9 ಸುತ್ತಿನ ಮಾತುಕತೆಯ ಬಳಿಕ 390 ಭೂಮಾಲೀಕರ ಜೊತೆ ಒಪ್ಪಂದ ಏರ್ಪಡಿಸಲಾಯಿತು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹280 ಕೋಟಿ ಉಳಿಯುತ್ತಿತ್ತು. ಇಲ್ಲದಿದ್ದರೆ ನ್ನೂ ₹400 ಕೋಟಿ ನಷ್ಟವಾಗುತ್ತಿತ್ತು. ಮಧ್ಯಸ್ಥಿಕೆ ಪರಿಣಾಮ ₹680 ಕೋಟಿ ನಷ್ಟ ಉಂಟಾಗುವುದು ತಪ್ಪುವುದರಲ್ಲಿತ್ತು. ಆದರೆ ಒಬ್ಬ ಹಿರಿಯ ಅಧಿಕಾರಿ ತನ್ನ ನಿವೃತ್ತಿ ಹತ್ತಿರದಲ್ಲಿ ವಿಚಕ್ಷಣಾ ಕ್ರಮ ಕೈಗೊಳ್ಳಬಹುದೆಂಬ ಭಯದಿಂದ ಸಹಿ ಹಾಕಲು ನಿರಾಕರಿಸಿದರು. ಪರಿಣಾಮ ಒಪ್ಪಂದ ಕುಸಿದುಬಿತ್ತು. ಇದು ಬಹುತೇಕ ಅಧಿಕಾರಿಗಳ ಮನಸ್ಥಿತಿಯಾಗಿದೆ ಎಂದು ಅವರು ನೆನಪಿಸಿಕೊಂಡರು.
ಭೂಸ್ವಾಧೀನ ಪ್ರಕರಣಗಳಲ್ಲಿ ಮರಣದಂಡನೆ ಅರ್ಜಿಗಳನ್ನು ಪರಿಶೀಲಿಸಿದಾಗ, ಕೋವಿಡ್-19 ಅವಧಿಯ ಒಂದು ಗಮನಾರ್ಹ ಉದಾಹರಣೆಯನ್ನು ನ್ಯಾಯಮೂರ್ತಿ ಕುಮಾರ್ ಪ್ರಸ್ತಾಪಿಸಿದರು. ಕೆಲವು ಜಾರಿ ಅರ್ಜಿಗಳು ದಶಕಗಳಿಂದ ಬಾಕಿ ಉಳಿದಿವೆ. ಪ್ರಕರಣವೊಂದು ಇತ್ಯರ್ಥವಾಗಲು 27 ವರ್ಷ ತೆಗೆದುಕೊಂಡಿತು. ಮೂಲ ಪರಿಹಾರ ₹23,000 ನೀಡಬೇಕಿತ್ತು. ಆದರೆ ಬಳಿಕ ₹1.85 ಲಕ್ಷಕ್ಕೆ ಏರಿಕೆಯಾಯಿತು. ಸರ್ಕಾರ ಅದಾಗಲೇ ₹72 ಲಕ್ಷ ಪಾವತಿಸಿದರೂ ಪ್ರಕರಣ ಇತ್ಯರ್ಥವಾಗಲಿಲ್ಲ. ಕೊನೆಗೆ ಮುಖ್ಯ ಕಾರ್ಯದರ್ಶಿಯವರು ₹56 ಕೋಟಿ ಠೇವಣಿ ಇಡಲು ಒಪ್ಪಿಕೊಂಡರು, ಇದರಿಂದಾಗಿ ಸುಮಾರು 7,000 ಪ್ರಕರಣಗಳು ಬಗೆಹರಿದವು ಎಂದು ಅವರು ಸ್ಮರಿಸಿದರು.
ಸರ್ಕಾರಿ ವ್ಯಾಜ್ಯಗಳು ಪರಿಹರಿಸದ ಕಾರಣಕ್ಕೆ ಬಾಕಿ ಉಳಿಯುತ್ತಿಲ್ಲ ಬದಲಿಗೆ ಅಧಿಕಾರಿಗಳು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಹಿಂಜರಿಯುವುದರಿಂದ ಇತ್ಯರ್ಥವಾಗುತ್ತಿಲ್ಲ ಎಂದು ಅವರು ಬೆರಳು ಮಾಡಿದರು.
ಸರ್ಕಾರದ ಪ್ರಕರಣಗಳನ್ನು ಟ್ರ್ಯಾಕ್ ಮಾಡಲು ಎಲ್‌ಐಎಂಬಿಎಸ್ ಪೋರ್ಟಲ್ (ಕಾನೂನು ಮಾಹಿತಿ ನಿರ್ವಹಣೆ ಮತ್ತು ಸಾರಾಂಶ ವ್ಯವಸ್ಥೆ) ಬಳಸಬಹುದು. ಆ ಮೂಲಕ ಯಾವ ಇಲಾಖೆ ಹೆಚ್ಚು ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರುತ್ತಿದೆ ಎಂಬುದನ್ನು ಗುರುತಿಸಿ, ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಸೂಚಿಸಬಹುದು ಎಂದು ಅವರು ಹೇಳಿದರು. ಈ ಪ್ರಯತ್ನವನ್ನು ಬೆಂಬಲಿಸುವಂತೆ ಅವರು ಸಮ್ಮೇಳನದಲ್ಲಿ ಹಾಜರಿದ್ದ ಮಧ್ಯಸ್ಥಿಕೆದಾರರಿಗೆ ಕರೆ ನೀಡಿದರು.
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್, ಗುವಾಹಟಿ, ಅಲಾಹಾಬಾದ್, ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಹಿರಿಯ ಕಾನೂನು ಅಧಿಕಾರಿಗಳು ಮತ್ತು ಮಧ್ಯಸ್ಥಿಕೆದಾರರು ಭಾಗವಹಿಸಿದ್ದ ಅಧಿವೇಶನ ವ್ಯಾಜ್ಯ ನಿರ್ವಹಣೆ, ನೀತಿ ಜಾರಿ ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯಬೇಕಾದ ಪಾಠಗಳ ಕುರಿತು ಚರ್ಚೆ ನಡೆಸಿತು.