A1
A1
ಸುದ್ದಿಗಳು

[ನೀಟ್ ಪರೀಕ್ಷೆ- ಬ್ರಾ ವಿವಾದ] ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್‌ ನಕಾರ

Bar & Bench

ಕೊಲ್ಲಂ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ಹಾಜರಾಗುವ ವೇಳೆ ಪರೀಕ್ಷಾ ಕೇಂದ್ರ ಪ್ರವೇಶಿಸುವುದಕ್ಕೂ ಮುನ್ನ ಬ್ರಾ ತೆಗೆಯಬೇಕೆಂಬ ಒತ್ತಡಕ್ಕೆ ಒಳಗಾಗಿದ್ದ ಮಹಿಳಾ ಅಭ್ಯರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿದೆ [ಆಸಿಫ್‌ ಆಜಾದ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ತನಿಖೆ ಇನ್ನೂ ನಡೆಯುತ್ತಿರುವುದರಿಂದ ಮತ್ತು ಪ್ರಕರಣ ಕ್ರಿಮಿನಲ್ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಕಕ್ಷಿದಾರರ ಪರ ವಕೀಲರ ವಾದ ಆಲಿಸಿದ ನಂತರ ಮತ್ತು ಲಭ್ಯವಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದ ನಂತರ, ಪ್ರಕರಣ ತನಿಖೆ ಇನ್ನೂ ನಡೆಯುತ್ತಿರುವುದು ತಿಳಿದು ಬರುತ್ತದೆ. ಪ್ರಕರಣ ಕ್ರಿಮಿನಲ್ ನ್ಯಾಯಾಲಯದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ನಾವು ಭಾವಿಸುತ್ತೇವೆ. ಇಂತಹ ಸಂದರ್ಭಗಳಲ್ಲಿ ಈ ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ, ”ಎಂಬುದಾಗಿ ತೀರ್ಪಿನಲ್ಲಿ ಹೇಳಲಾಗಿದೆ.

ದೇಶದೆಲ್ಲೆಡೆ ಪರೀಕ್ಷೆ ನಡೆಸುವಾಗ ಒಂದೇ ರೀತಿಯ ನಿಯಮಾವಳಿ ಅನುಸರಿಸಲು ನಿರ್ದೇಶಿಸುವಂತೆ ಆಸಿಫ್‌ ಆಜಾದ್‌ ಎಂಬುವವರು ಖುದ್ದು ಪಿಐಎಲ್‌ ಸಲ್ಲಿಸಿದ್ದರು.