ಕೊಲ್ಲಂ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಹಾಜರಾಗುವ ವೇಳೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಬ್ರಾ ತೆಗೆಯಬೇಕೆಂಬ ಒತ್ತಡಕ್ಕೆ ಒಳಗಾಗಿದ್ದ ಮಹಿಳಾ ಅಭ್ಯರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಪರೀಕ್ಷೆಯ ಹೊಣೆ ಹೊತ್ತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ಕೇರಳ ಹೈಕೋರ್ಟ್ ಇತ್ತೀಚೆಗೆ ವಿವರವಾದ ವರದಿ ಕೇಳಿದೆ [ಆಸಿಫ್ ಆಜಾದ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಪರೀಕ್ಷೆ ನಡೆಸಿದ ರೀತಿ ಮತ್ತು ಘಟನೆ ಬಗ್ಗೆ ನಡೆಸಲಾದ ತನಿಖೆ ಕುರಿತಂತೆ ಎಲ್ಲಾ ಪೂರಕ ದಾಖಲೆಗಳೊಂದಿಗೆ ವಿವರವಾದ ಹೇಳಿಕೆ ಸಲ್ಲಿಸುವಂತೆ ಸಂಸ್ಥೆಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಖುದ್ದು ಹಾಜರಿದ್ದ ಅರ್ಜಿದಾರ ಆಸಿಫ್ ಆಜಾದ್ ಸಲ್ಲಿಸಿದ್ದ ಮನವಿಯಲ್ಲಿ ದೇಶದೆಲ್ಲೆಡೆ ಪರೀಕ್ಷೆ ನಡೆಸುವಾಗ ಒಂದೇ ರೀತಿಯ ಮಾನದಂಡ ಅನುಸರಿಸಲು ನಿರ್ದೇಶಿಸುವಂತೆ ಕೋರಲಾಗಿದೆ. ನಾಳೆ (ಆಗಸ್ಟ್ 5 ರಂದು) ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಕೊಲ್ಲಂ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿಗಳ ತಪಾಸಣೆ ನಡೆಸಿದಾಗ ಒಳ ಉಡುಪುಗಳಲ್ಲಿ ಲೋಹದ ಕೊಕ್ಕೆಗಳು ಪತ್ತೆಯಾಗಿದ್ದರಿಂದ ಪರೀಕ್ಷೆ ಬರೆಯುವವರು ಬ್ರಾ ತೆಗೆಯುವಂತೆ ಸೂಚಿಸಲಾಗಿತ್ತು. ಪರೀಕ್ಷಾಧಿಕಾರಿಗಳ ಈ ಸೂಚನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅನೇಕ ವಿದ್ಯಾರ್ಥಿನಿಯರು ಮುಜುಗರ, ಅಪಮಾನದಿಂದ ತೀವ್ರ ಒತ್ತಡಕ್ಕೆ ಒಳಗಾಗಿ, ಮಾನಸಿಕವಾಗಿ ಕುಗ್ಗಿ ಪರೀಕ್ಷೆ ಬರೆದಿದ್ದಾಗಿ ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೆ, ಹೀಗೆ ತೆಗೆಸಲಾದ ವಿದ್ಯಾರ್ಥಿನಿಯರ ಬ್ರಾಗಳನ್ನು ಪ್ರತ್ಯೇಕವಾಗಿ ಇರಿಸದೆ ಕೋಣೆಯೊಂದರಲ್ಲಿ ಒಂದರ ಮೇಲೊಂದರಂತೆ ಇರಿಸುವ ಮೂಲಕ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಬಗ್ಗೆಯೂ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಇನ್ನು ಎನ್‌ಟಿಎಯನ್ನು ಪ್ರತಿನಿಧಿಸಿದ್ದ ಸ್ಥಾಯಿ ವಕೀಲರಾದ ಎಸ್ ನಿರ್ಮಲ್, ಸಂಸ್ಥೆಯ ವಿರುದ್ಧದ ಅರ್ಜಿದಾರರ ಆರೋಪವು ಅಸಮರ್ಪಕವಾಗಿದೆ. ಸಂಸ್ಥೆಯು ದೇಶಾದ್ಯಂತ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ನಡೆಸಿದೆ ಎಂದು ಸಮರ್ಥಿಸಿದರು. ಅಲ್ಲದೆ, ಘಟನೆಯ ಬಗ್ಗೆ ಇದಾಗಲೇ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮನವಿಯು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯಾಗಲು ಅಗತ್ಯವಾದ ಅಂಶಗಳನ್ನು ಹೊಂದಿಲ್ಲ ಎಂದೂ ಆಕ್ಷೇಪಿಸಿದರು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: