CJI DY Chandrachud  
ಸುದ್ದಿಗಳು

ವೈದ್ಯಕೀಯ ಶಿಕ್ಷಣ ಸುಧಾರಣೆಯಾಗಬೇಕಿದೆ ಎಂಬುದನ್ನು ನೀಟ್ ಪರೀಕ್ಷೆ ಕುರಿತ ದಾವೆಗಳ ಪ್ರಮಾಣ ಸೂಚಿಸುತ್ತಿದೆ: ಸಿಜೆಐ

ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ಅಧ್ಯಕ್ಷನಾಗಿ, ಭಾರತದ ಎಲ್ಲಾ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವೈದ್ಯರಿಂದ ಟೆಲಿ-ಎವಿಡೆನ್ಸ್ ಪಡೆಯುವುದನ್ನು ಸುಗಮಗೊಳಿಸುವತ್ತ ಯತ್ತಿಸುತ್ತಿರುವುದಾಗಿ ತಿಳಿಸಿದ ಸಿಜೆಐ.

Bar & Bench

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪರೀಕ್ಷೆ (ನೀಟ್) ಸುತ್ತ ನ್ಯಾಯಾಲಯಗಳಲ್ಲಿ ಹೂಡಲಾಗಿರುವ ದಾವೆಗಳ ಪ್ರಮಾಣ, ದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆಯ ಅಗತ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಭಾನುವಾರ ಹೇಳಿದ್ದಾರೆ.

ಸರ್‌ ಗಂಗಾರಾಮ್‌ ಆಸ್ಪತ್ರೆ ವತಿಯಿಂದ ನವದೆಹಲಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸರ್ ಗಂಗಾ ರಾಮ್ ನೆನಪಿನ 19ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ʼಎ ಪ್ರಿಸ್ಕ್ರಿಪ್ಷನ್‌ ಫಾರ್‌ ಜಸ್ಟೀಸ್‌: ಕ್ವೆಸ್ಟ್‌ ಫಾರ್‌ ಫೇರ್‌ನೆಸ್‌ ಅಂಡ್‌ ಈಕ್ವಾಲಿಟಿ ಇನ್‌ ಹೆಲ್ತ್‌ಕೇರ್‌' (ನ್ಯಾಯಕ್ಕಾಗಿ ಒಂದು ಲಿಖಿತ ಸಲಹೆ: ವೈದ್ಯಕೀಯ ರಂಗದಲ್ಲಿ ನ್ಯಾಯಸಮ್ಮತತೆ ಮತ್ತು ಸಮಾನತೆಗಾಗಿ ಹುಡುಕಾಟ) ಎಂಬ ವಿಷಯದ ಕುರಿತು ಮಾತನಾಡಿದರು.

ಅನ್ಯಾಯವಾಗುವಂತಹ ಸಂದರ್ಭಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರೂ ಸರ್ಕಾರದ ನೀತಿ ನಿರೂಪಣಾ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.

“ಸಾಮಾನ್ಯವಾಗಿ ನ್ಯಾಯಾಲಯಗಳು ನೀತಿ ನಿರೂಪಣೆಯ ವಲಯವನ್ನು ಪ್ರವೇಶಿಸುವಂತಿಲ್ಲ ವಿದ್ಯಾರ್ಥಿಗಳ ಅಹವಾಲು ಆಲಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಅನ್ಯಾಯವಾದಾಗಲೆಲ್ಲಾ ಮಧ್ಯಪ್ರವೇಶಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ನೀಟ್‌ಗೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ದಾವೆಗಳ ಪ್ರಮಾಣ ಲಕ್ಷಾಂತರ ವಿದ್ಯಾರ್ಥಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಸೂಚಿಸುತ್ತದೆ. ಭಾರತದಲ್ಲಿ ವೈದ್ಯಕೀಯ ವೃತ್ತಿ ಹೆಚ್ಚು ಬೇಡಿಕೆಯಿರುವ ಉದ್ಯೋಗಗಳಲ್ಲಿ ಒಂದು ಎಂಬುದಕ್ಕೆ ಇದು ಪುರಾವೆಯಾಗಿದ್ದು ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆಯ ಅಗತ್ಯವಿದೆ ಎಂಬುದನ್ನು ವ್ಯಾಜ್ಯ ಸೂಚಿಸುತ್ತಿದೆ” ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ದೇವರೆಂದೇ ನಂಬಲಾಗಿರುವ ವೈದ್ಯರು, ಶಿಕ್ಷಕರು ಹಾಗೂ ವಕೀಲರ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತು ಪ್ರಾಮುಖ್ಯತೆಯನ್ನು ಚರ್ಚಿಸುವ ಮೂಲಕ ಅವರು ತಮ್ಮ ಭಾಷಣ ಪ್ರಾರಂಭಿಸಿದರು.

ಜೊತೆಗೆ "ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಾಕ್ಷ್ಯ ನೀಡುವುದು ಸಾಮಾನ್ಯವಾಗಿ ಸಮಯ ತೆಗೆದುಕೊಳ್ಳುವ ಕಸರತ್ತಾಗಿ ಕೊನೆಗೊಳ್ಳುತ್ತದೆ, ಇದು ವೈದ್ಯಕೀಯ ವೃತ್ತಿಪರರ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ಅಧ್ಯಕ್ಷನಾಗಿ, ಭಾರತದ ಎಲ್ಲಾ ನ್ಯಾಯಾಲಯಗಳಲ್ಲಿ ವೀಡಿಯೊ ಕಾನ್ಫರೆನ್ಸ್‌ ಸೌಕರ್ಯ ಕಲ್ಪಿಸುವ ಮೂಲಕ ವೈದ್ಯರಿಂದ ಟೆಲಿ-ಎವಿಡೆನ್ಸ್ (ದೂರ ಸಂಪರ್ಕದ ಮೂಲಕ ದಾಖಲಿಸಿಕೊಳ್ಳುವ ಸಾಕ್ಷ್ಯ) ಪಡೆಯುವುದನ್ನು ಸುಗಮಗೊಳಿಸುವತ್ತ ನಾನು ಯತ್ನಿಸುತ್ತಿದ್ದೇನೆ. ಇದು ವೈದ್ಯರ ಸಮಯವನ್ನು ಉಳಿಸಲು ಕಾರಣವಾಗಲಿದ್ದು ಆ ಸಮಯವನ್ನು ರೋಗಿಗಳ ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಬಳಸಿಕೊಳ್ಳಬಹುದು” ಎಂದು ಹೇಳಿದರು.