<div class="paragraphs"><p>SG Tushar Mehta, Supreme court, and CJI NV Ramana</p></div>

SG Tushar Mehta, Supreme court, and CJI NV Ramana

 
ಸುದ್ದಿಗಳು

ನೀಟ್ ಸ್ನಾತಕೋತ್ತರ ಪ್ರಕರಣ: ವಿಶೇಷ ಪೀಠ ರಚನೆಯ ಸುಳಿವು ನೀಡಿದ ಸಿಜೆಐ ಎನ್‌ ವಿ ರಮಣ

Bar & Bench

ನೀಟ್‌ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ವಿಶೇಷ ಪೀಠ ರಚಿಸುವ ಸೂಚನೆಯನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ನೀಡಿದ್ದಾರೆ. ಪ್ರಕರಣವನ್ನು ಇಂದು ಪ್ರಸ್ತಾಪಿಸಿದ ಅವರು “ಪ್ರಕರಣದ ವಿಚಾರಣೆಗೆ ವಿಶೇಷ ಪೀಠ ರಚಿಸಬಹುದೇ ಎಂದು ನಾಳೆ ಪರಿಶೀಲಿಸುತ್ತೇನೆ. ಈ ಇಡೀ ವಾರ ಇತರೆ ಪ್ರಕರಣಗಳ (ಮಿಸೆಲೇನಿಯಸ್) ವಿಚಾರಣೆಯಿಂದ ಕೂಡಿದೆ” ಎಂದರು [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಆದ್ಯತೆಯ ಮೇಲೆ ವಿಚಾರಣೆಗೆ ಪರಿಗಣಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. "ಮೂವರು ನ್ಯಾಯಮೂರ್ತಿಗಳ ಬದಲಿಗೆ ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಕೂಡ ಪ್ರಕರಣವನ್ನು ಪಟ್ಟಿ ಮಾಡಬಹುದು. ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರ ಆತಂಕ ನೈಜವಾದುದು" ಎಂದು ಹೇಳಿದರು.

ಸೋಮವಾರ ಪ್ರಕರಣವನ್ನು ನ್ಯಾ. ಚಂದ್ರಚೂಡ್‌ ಅವರೆದುರು ಪ್ರಸ್ತಾಪಿಸಿದ್ದ ಎಸ್‌ಜಿ ಮೆಹ್ತಾ ಅವರು 'ತುರ್ತುʼ ಇರುವುದರಿಂದ ಮರುದಿನವೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು. ಈ ಬಗ್ಗೆ ಸಿಜೆಐ ರಮಣ ಅವರೊಂದಿಗೆ ಮಾತನಾಡಿ ನಿರ್ಧರಿಸುವುದಾಗಿ ನ್ಯಾ. ಚಂದ್ರಚೂಡ್‌ ಹೇಳಿದ್ದರು. ಜನವರಿ 6ಕ್ಕೆ ಈ ಮೊದಲು ನಿಗದಿಯಾಗಿದ್ದ ಪ್ರಕರಣವನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಶೀಘ್ರವೇ ವಿಚಾರಣೆ ನಡೆಸಬೇಕೆಂದು ಕೋರಲಾಗಿತ್ತು.

ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ.10 ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನ್ಯಾಯಾಲಯದ ಮುಂದಿದೆ.