Centre files affidavit in the NEET-UG case 
ಸುದ್ದಿಗಳು

ನೀಟ್ ರದ್ದತಿ ಬೇಡ; ದೊಡ್ಡ ಪ್ರಮಾಣದ ಅಕ್ರಮ ನಡೆದಿರುವ ಪುರಾವೆ ಇಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸಮರ್ಥನೆ

Bar & Bench

ಪ್ರಸಕ್ತ ಸಾಲಿನ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೂಲಕ ಪ್ರವೇಶಾತಿ ಪಡೆಯುವಲ್ಲಿ ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಯಾದ ಬಗ್ಗೆ ಪುರಾವೆಗಳಿಲ್ಲದ ಕಾರಣ ಮೇ 5ರಂದು ನಡೆದಿದ್ದ ಪರೀಕ್ಷೆ ರದ್ದುಗೊಳಿಸಬಾರದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅವ್ಯವಹಾರ, ಸಾಮೂಹಿಕ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಯ ವಿವಾದದಲ್ಲಿ ನೀಟ್ ಪದವಿ ಪರೀಕ್ಷೆ ಸಿಲುಕಿರುವಾಗಲೇ ಸರ್ಕಾರ ಈ ವಾದ ಮಂಡಿಸಿದೆ.

ನೀಟ್ ಯುಜಿ ಪರೀಕ್ಷೆ  ರದ್ದುಪಡಿಸಿ ಮತ್ತು ಅದನ್ನು ಹೊಸದಾಗಿ ನಡೆಸುವುದು ತರ್ಕಬದ್ಧವಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಸಮರ್ಥಿಸಿಕೊಂಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ಯುಜಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠ ಜುಲೈ 8 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಹಾಗೂ ಮರು ಪರೀಕ್ಷೆಯ ಅಗತ್ಯವಿದೆಯೇ ಎಂಬುದನ್ನು ನ್ಯಾಯಾಲಯ ಪ್ರಾಥಮಿಕವಾಗಿ ಪರಿಶೀಲಿಸಲಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಯ ಪುರಾವೆ ಇಲ್ಲದರಿರುವಾಗ ಇಡೀ ಪರೀಕ್ಷೆ ಮತ್ತು ಈಗಾಗಲೇ ಪ್ರಕಟಗೊಂಡಿರುವ ಫಲಿತಾಂಶವನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ.

  • ಯಾವುದೇ ಪರೀಕ್ಷೆಯಲ್ಲಿ ಅನ್ಯಾಯ ವಿಧಾನದಲ್ಲಿ ಪರೀಕ್ಷೆ ಬರೆಯದ ಬಹುತೇಕ ಸಂಖ್ಯೆಯ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ರೂಪಿತವಾದ ಸ್ಪರ್ಧಾತ್ಮಕ ಹಕ್ಕುಗಳಿದ್ದು ಅವು ಅಪಾಯಕ್ಕೆ ಸಿಲುಕಬಾರದು.

  • ಸಂಪೂರ್ಣವಾಗಿ ಪರೀಕ್ಷೆ ರದ್ದುಗೊಳಿಸುವುದು 2024ರಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗಂಭೀರವಾಗಿ ಅಪಾಯಕ್ಕೆ ಸಿಲುಕಿಸುತ್ತದೆ.

  • ಪ್ರಸ್ತುತ ದಾವೆಯನ್ನು ಪ್ರತಿಕೂಲ ರೀತಿಯಲ್ಲಿ ತೆಗೆದುಕೊಂಡಿಲ್ಲ ಮತ್ತು ಪರೀಕ್ಷೆ ಬರೆದ ಅಭ್ಯರ್ಥಿಗಳ ಕಳವಳದ ಬಗ್ಗೆ ಸಂಪೂರ್ಣ ಅರಿವಿದೆ.   

  • ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶಿಸಿಸಲಾಗಿದೆ.   

  • ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ, ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಕ್ರಮಗಳನ್ನು ಸೂಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.

  • ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಸಂಬಂಧ  2024ರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯಿದೆಯನ್ನು ಜೂನ್ 21ರಂದು ಜಾರಿಗೆ ತರಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಕೂಡ ಇದೇ ಬಗೆಯ ಅಫಿಡವಿಟ್ ಸಲ್ಲಿಸಿದೆ. ಪರೀಕ್ಷೆಯನ್ನು ರದ್ದುಗೊಳಿಸುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗುತ್ತದೆ. ಪಾಟ್ನಾ ಮತ್ತು ಗೋಧ್ರಾದ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಅವ್ಯವಹಾರಗಳು ನಡೆದಿವೆ. ವೈಯಕ್ತಿಕವಾಗಿ ನಡೆದಿರುವ ಅಕ್ರಮಗಳು ಪರೀಕ್ಷೆಯ ಸಮಗ್ರತೆಗೆ ಧಕ್ಕೆ ತಂದಿಲ್ಲ ಎಂದು ಅದು ಹೇಳಿದೆ.