Highway
Highway 
ಸುದ್ದಿಗಳು

ಪಾದಚಾರಿ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದರೆ, ವಾಹನ ಸವಾರರನ್ನು ಹೊಣೆ ಮಾಡುವಂತಿಲ್ಲ: ಮುಂಬೈ ನ್ಯಾಯಾಲಯ

Bar & Bench

ಪಾದಚಾರಿಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದರೆ, ವಾಹನ ಸವಾರರನ್ನು ಕ್ರಿಮಿನಲ್‌ ಹೊಣೆಗಾರರನ್ನಾಗಿ ಮಾಡುವಂತಿಲ್ಲ ಎಂದು ತಿಳಿಸಿರುವ ಮುಂಬೈನ ನ್ಯಾಯಾಲಯವೊಂದು ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ 56 ವರ್ಷದ ಮಹಿಳೆಯನ್ನು ಖುಲಾಸೆಗೊಳಿಸಿದೆ. (ಮಹಾರಾಷ್ಟ್ರ ಸರ್ಕಾರ ಮತ್ತು ಸ್ವಪ್ನಿಲಾ ಎಸ್ ಸಖಲ್ಕರ್ ನಡುವಣ ಪ್ರಕರಣ)

2015ರಲ್ಲಿ ದುಡಿಕಿನ ಚಾಲನೆಯಿಂದಾಗಿ ದೂರುದಾರೆ ಅಪೇಕ್ಷಾ ಅವರನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಸ್ವಪ್ನಿಲಾ ಅವರ ಮೇಲಿತ್ತು. ಅಪೇಕ್ಷಾ ತಮ್ಮ ಕಚೇರಿಗೆ ನಡೆದು ಹೋಗುತ್ತಿದ್ದಾಗ ಸ್ವಪ್ನಿಲಾ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಕುಸಿದು ಬಿದ್ದ ತನ್ನ ಮೇಲೆ ಕಾರಿನ ಮುಂದಿನ ಚಕ್ರ ಹರಿದು ತಮ್ಮ ಕಾಲು ಹಾಗೂ ಹೆಬ್ಬೆರಳಿಗೆ ಗಾಯವಾಗಿತ್ತು ಎಂದು ಅಪೇಕ್ಷಾ ಪರವಾಗಿ ಅವರ ತಂದೆ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರವೀಣ್ ಪಿ ದೇಶಮನೆ " ರಸ್ತೆ ದಾಟುವಾಗ ಅಥವಾ ನಡೆಯುವಾಗ ಮುನ್ನೆಚ್ಚರಿಕೆ ವಹಿಸುವುದು ಪಾದಚಾರಿಗಳ ಕರ್ತವ್ಯ. ಪಾದಚಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಅಪಘಾತ ಸಂಭವಿಸಿದಲ್ಲಿ ವಾಹನ ಸವಾರರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಹೂಡುವಂತಿಲ್ಲ" ಎಂದು ಹೇಳಿದರು.

ಅಪಘಾತಕ್ಕೆ ಆರೋಪಿ ಸ್ವಪ್ನಿಲಾ ಅವರ ನಿರ್ಲಕ್ಷ್ಯ ಕಾರಣ ಎಂದು ತೋರಿಸಲು ಪುರಾವೆಗಳಿವೆ ಎಂಬುದಾಗಿ ಪ್ರಾಸಿಕ್ಯೂಷನ್‌ ವಾದ ಮಂಡಿಸಿತು. ಆದರೆ ಸ್ವಪ್ನಿಲಾ ಪರ ವಾದ ಮಂಡಿಸಿದ ವಕೀಲ ಭೂಷಣ್‌ ದೇಶಮುಖ್‌ ತಮ್ಮ ಕಕ್ಷೀದಾರರು ಯಾವ ಸಮಯದಲ್ಲಿ ಕಾರು ಚಾಲನೆ ಮಾಡುತ್ತಿದ್ದರು ಎಂಬುದಕ್ಕೆ ಸ್ಥಾಪಿತ ಪುರಾವೆಗಳಿಲ್ಲ ಮತ್ತು ಸ್ವಪ್ನಿಲಾ ಅವರು ನಿರ್ಲಕ್ಷ್ಯ ಅಥವಾ ದುಡುಕುತನದಿಂದ ವರ್ತಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದರು.

ಅಪೇಕ್ಷಾ ಅವರು ರಸ್ತೆಯ ಯಾವ ನಿರ್ದಿಷ್ಟ ಸ್ಥಳದಲ್ಲಿ ಅಪಘಾತ ಸಂಭವಿಸಿತ್ತು ಎಂದು ಹೇಳಲು ವಿಫಲವಾಗಿದ್ದಾರೆ. ಮತ್ತು ಪಾದಚಾರಿಗಳಿಗೆಂದೇ ಮೀಸಲಿರುವ ಫುಟ್‌ಪಾತ್‌ ಬಳಸದೇ ಇರಲು ಕಾರಣವೇನೆಂದು ಹೇಳಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. ದೂರುದಾರೆ ಅಪೇಕ್ಷಾ ಅವರು ಒದಗಿಸಿರುವ ಸಾಕ್ಷ್ಯಗಳು ಅಸ್ಪಷ್ಟ ಮತ್ತು ಸಾಮಾನ್ಯವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಗಳು ಇದ್ದಿದ್ದರೆ ಆರೋಪಿಗಳ ಪಾತ್ರ ಮಾತ್ರವಲ್ಲದೆ ಅಪಘಾತಕ್ಕೆ ಕಾರಣವಾದ ನಿಜ ಸಂಗತಿಗಳು ತಿಳಿಯುತ್ತಿದ್ದವು ಎಂದು ನ್ಯಾಯಾಲಯ ಹೇಳಿದೆ. ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಅಪಘಾತದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸಲು ವಿಶ್ವಾಸಾರ್ಹವಾದುದು ಏನೂ ಇಲ್ಲ. ನಿರ್ಲಕ್ಷ್ಯದ ಚಾಲನೆ ಮಾಡಿದ್ದಾರೆ ಎನ್ನಲು ಯಾವುದೇ ಗಣನೀಯ ವಿವರಗಳನ್ನು ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟರು.