Arvind Kejriwal and CBIArvind Kejriwal (FB)  
ಸುದ್ದಿಗಳು

ಸುದ್ದಿಗೆ ಗ್ರಾಸ ಒದಗಿಸಲೆಂದು ಸಿಬಿಐ ಹೇಳಿಕೆ: ಬಂಧನ ವಿರೋಧಿಸಿದ ಅರವಿಂದ್ ಕೇಜ್ರಿವಾಲ್

ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಸಿಬಿಐ ಮತ್ತು ಕೇಜ್ರಿವಾಲ್ ಅವರ ಆದೇಶವನ್ನು ಕಾಯ್ದಿರಿಸುವ ಮೊದಲು ಸುದೀರ್ಘ ವಿಚಾರಣೆ ನಡೆಸಿದರು.

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಬುಧವಾರ) ಬೆಳಿಗ್ಗೆ ಮತ್ತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತನ್ನ ವಶಕ್ಕೆ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಮನವಿ ಕುರಿತಂತೆ ದೆಹಲಿ ನ್ಯಾಯಾಲಯ  ಬುಧವಾರ ಆದೇಶ ಕಾಯ್ದಿರಿಸಿದೆ.

ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಆದೇಶ ಕಾಯ್ದಿರಿಸುವ ಮುನ್ನ ಸುದೀರ್ಘವಾಗಿ ವಾದ ಆಲಿಸಿದರು.

ಸಿಬಿಐ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಇಂದು ಬೆಳಿಗ್ಗೆ ನ್ಯಾಯಾಧೀಶ ರಾವತ್‌ ಅವರು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿ ದಾಖಲಿಸಿದ್ದ ಮತ್ತೊಂದು ಮೊಕದ್ದಮೆಯಡಿ ಕೇಜ್ರಿವಾಲ್‌ ಈಗಾಗಲೇ ಸೆರೆವಾಸ ಅನುಭವಿಸುತ್ತಿದ್ದಾರೆ.

ವಿಚಾರಣೆ ವೇಳೆ ಸಿಬಿಐ ಕೇಜ್ರಿವಾಲ್ ಅವರನ್ನು ಐದು ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಕೋರಿತು.

ಖುದ್ದಾಗಿ ವಾದ ಮಂಡಿಸಿದ ಕೇಜ್ರಿವಾಲ್‌ ಅವರು ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವು ಆರೋಪಿಗಳು ಪ್ರಕರಣದಲ್ಲಿ ನಿರಪರಾಧಿಗಳು ಎಂದು ಸಮರ್ಥಿಸಿಕೊಂಡರು. ಮನೀಶ್‌ ಅವರ ಮೇಲೆ ಕೇಜ್ರಿವಾಲ್‌ ಗೂಬೆ ಕೂರಿಸಿದ್ದಾರೆ ಎಂಬ ಸಿಬಿಐ ವಾದವನ್ನು ಅವರು ಬಲವಾಗಿ ಅಲ್ಲಗಳೆದರು. ಸುದ್ದಿಗೆ ಗ್ರಾಸವಾಗಲೆಂದು ಸಿಬಿಐ ಇಂತಹ ಹೇಳಿಕೆ ನೀಡುತ್ತಿದೆ. ಎಲ್ಲಾ ಪತ್ರಿಕೆಗಳಲ್ಲಿ ಅದೇ ತಲೆಬರಹ ಬರಲಿ ಎಂಬುದು ಅದರ ಉದ್ದೇಶವಾಗಿದೆ ಎಂದು ದೂರಿದರು.

ಕೇಜ್ರಿವಾಲ್‌ ವಾದಕ್ಕೆ ತಲೆದೂಗಿದ ನ್ಯಾಯಾಲಯ ಸಿಬಿಐ ಹೇಳಿರುವಂತೆ ಮನೀಶ್‌ ಸಿಸೋಡಿಯಾ ಅವರ ವಿರುದ್ಧ ದೆಹಲಿ ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ಆರೋಪ ಮಾಡಿಲ್ಲ ಎಂದಿತು. ಆಗ ಸಿಬಿಐಗೆ ತಾನು ನೀಡಿದ್ದ ಹೇಳಿಕೆಯನ್ನು ಕೇಜ್ರಿವಾಲ್‌ ನ್ಯಾಯಾಲಯದೆದುರು ವಿವರಿಸಿದರು.

ನ್ಯಾಯಾಲಯ ಮುಂದುವರೆದು “ಮಾಧ್ಯಮ ಒಂದು ಸಾಲನ್ನಷ್ಟೇ ಎತ್ತಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮವನ್ನು ನಿಯಂತ್ರಿಸುವುದು ಬಹಳ ಕಷ್ಟ” ಎಂದಿತು.

ಸಿಬಿಐಯನ್ನು ಪ್ರತಿನಿಧಿಸಿದ್ದ ವಕೀಲ ಡಿ ಪಿ ಸಿಂಗ್, “ಕೇಜ್ರಿವಾಲ್‌ ಅವರನ್ನು ಸಿಬಿಐ ವಶಕ್ಕೆ ನೀಡುವ ಅಗತ್ಯವಿದೆ. ಮನೀಶ್‌ ಅವರ ಮೇಲೆಯೇ ಕೇಜ್ರಿವಾಲ್‌ ಸಂಪೂರ್ಣ ಹೊಣೆ ಹೊರಿಸಿ ತನಗೆ ಅಬಕಾರಿ ನೀತಿ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ನಮ್ಮ ಬಳಿ ಇರುವ ದಾಖಲೆಗಳನ್ನಿರಿಸಿಕೊಂಡು ಅವರನ್ನು ಪ್ರಶ್ನಿಸಬೇಕಿದೆ. ನಾವು ಅವರಿಗೆ ನೀವು ಏನನ್ನಾದರೂ ಒಪ್ಪಿಕೊಳ್ಳಬೇಕು ಎಂದು ಹೇಳಿಲ್ಲ” ಎಂದರು.

ಕೇಜ್ರಿವಾಲ್‌ ಅವರನ್ನು ಬಂಧಿಸುವ ಮೊದಲು ಅವರಿಗೆ ಕೇಳಲಾದ ಪ್ರಶ್ನೆಗಳಿಗೂ ಅವರು ಉತ್ತರಿಸಿಲ್ಲ ಎಂದ ಅವರು ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಅವರನ್ನು ಬಂಧಿಸಿದ್ದನ್ನು ಕೂಡ ಸಮರ್ಥಿಸಿಕೊಂಡರು.

ಈ ಮಧ್ಯೆ ಸಿಬಿಐ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್‌ ಚೌಧರಿ, ದೆಹಲಿ ಮುಖ್ಯಮಂತ್ರಿ ಅವರನ್ನು ಬಂಧಿಸುವ ಅಗತ್ಯ ಇತ್ತೆ. ಬಂಧನ ಕೋರುವಂತಹ ಬದಲಾವಣೆಗಳು ಏನಾಗಿದ್ದವು ಎಂದು ಪ್ರಶ್ನಿಸಿದರು. ಅಲ್ಲದೆ ಸಿಬಿಐಗೆ ಇರುವ ಸ್ವಾತಂತ್ರ್ಯವನ್ನೂ ಚೌಧರಿ ಪ್ರಶ್ನಿಸಿದರು. ಚೌಧರಿ ಅವರ ವಾದಕ್ಕೆ ಕೇಜ್ರಿವಾಲ್‌ ಪರ ವಾದ ಮಂಡಿಸುತ್ತಿರುವ ಮತ್ತೊಬ್ಬ ವಕೀಲ ವಿವೇಕ್‌ ಜೈನ್‌ ಕೂಡ ದನಿಗೂಡಿಸಿದರು.