ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾ;ಯು, ಕೈಗಾರಿಕಾ ನ್ಯಾಯಮಂಡಳಿ, ಸಣ್ಣ ದಾವೆಗಳ ನ್ಯಾಯಾಲಯ, ಸೇರಿದಂತೆ ರಾಜ್ಯದ ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಎಸ್‌ಒಪಿ) ಕುರಿತು ಕರ್ನಾಟಕ ಹೈಕೋರ್ಟ್ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ನಾಳೆಯಿಂದ ಇದು ಜಾರಿಗೆ ಬರಲಿದೆ.
ಆ ಪ್ರಕಾರ ಸಾಧ್ಯವಾದಷ್ಟು ಮಟ್ಟಿಗೆ ಇ- ಫೈಲಿಂಗ್ ಮೂಲಕವೇ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಆದರೆ ನೇರವಾಗಿ (ಹಾರ್ಡ್‌ಕಾಪಿ ಮೂಲಕ) ಅರ್ಜಿ ಸಲ್ಲಿಸುವ ವಕೀಲರುಗಳಿಗೆ ಮುಖ್ಯ ನ್ಯಾಯಾಲಯ ಕಟ್ಟಡದ ಹೊರಗಡೆ ಪ್ರತ್ಯೇಕ ಕೌಂಟರ್ ತೆರೆಯುವಂತೆ ಸೂಚಿಸಲಾಗಿದೆ.
ಕಾಲಮಿತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕೆಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಗದಿಪಡಿಸಿದ ಪ್ರಕರಣಗಳ ಹೊರತಾಗಿ ಉಳಿದ ಎಲ್ಲಾ ಪ್ರಕರಣಗಳ ಸಾಕ್ಷ್ಯಗಳ ವಿಚಾರಣೆಯನ್ನು ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಸದ್ಯದ ಮಟ್ಟಿಗೆ ಮುಂದೂಡಬಹುದು ಎಂದು ತಿಳಿಸಲಾಗಿದೆ. ಕಾಲಮಿತಿಯ ಪ್ರಕರಣಗಳನ್ನು ಆಲಿಸುವಾಗ ಪೂರ್ವಾನುಮತಿ ಮೂಲಕ ಸಾಕ್ಷ್ಯಗಳ ವಿಚಾರಣೆಗೆ ಅವಕಾಶ ಮಾಡಿಕೊಡಲಾಗಿದೆ.
ಇದೇ ವೇಳೆ ವಿಚಾರಣೆ ಪೂರ್ಣಗೊಂಡು ತೀರ್ಪನ್ನು ಕಾಯ್ದಿರಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರುಗಳು ತೀರ್ಪು ಪ್ರಕಟಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.
ಸಿಆರ್‌ಪಿಸಿ ಕಲಂ 164ರ ಅಡಿ ನೀಡಲಾಗುವ ಹೇಳಿಕೆಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಗಳು ದಾಖಲಿಸಿಕೊಳ್ಳಬೇಕಿದ್ದು ಇಮೇಲ್ ಮೂಲಕವೇ ವಕೀಲರು ಇದಕ್ಕೆ ಅನುಮತಿ ಪಡೆಯಬೇಕಿದೆ. ಅರ್ಜಿಗಳ ಆದೇಶದ ಬಗೆಗಿನ ಮಾಹಿತಿಯನ್ನು ಫೋನ್ ಎಸ್‌ಎಂಎಸ್ ಇಲ್ಲವೇ ಇಮೇಲ್ ಮೂಲಕ ನ್ಯಾಯಾಲಯಗಳು ಒದಗಿಸಲಿವೆ.
ತೀರಾ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಸ ಅಥವಾ ಈಗಾಗಲೇ ಸಲ್ಲಿಸಿದ/ ಸಲ್ಲಿಸುತ್ತಿರುವ ಮಧ್ಯಂತರ ಅರ್ಜಿಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳ ಅಧಿಕೃತ ಇಮೇಲ್ ಐಡಿಗಳಿಗೆ ಕಳಿಸಬಹುದು. ಇಂತಹ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು/ ಪ್ರಧಾನ ನ್ಯಾಯಾಧೀಶರು ನಿರ್ಧರಿಸಿದರೆ ಸಂಬಂಧಪಟ್ಟ ನ್ಯಾಯಾಂಗ ಅಧಿಕಾರಿ ಪ್ರಕರಣದ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸುತ್ತಾರೆ ಎಂದು ಸೂಚಿಸಲಿದ್ದಾರೆ.
ಸಾಧ್ಯವಾದಷ್ಟು ಮಟ್ಟಿಗೆ, ಜೈಲಿನಲ್ಲಿರುವ ಆರೋಪಿಗಳ ಹೇಳಿಕೆಗಳನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ ಸೆಕ್ಷನ್ 313 ರ ಅಡಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ದಾಖಲಿಸಿಕೊಳ್ಳಬೇಕಿದೆ.
ನ್ಯಾಯಾಲಯಗಳ ದೃಢೀಕೃತ ನಕಲು, ಆದೇಶದ ಪ್ರತಿ ಸೇರಿದಂತೆ ನಕಲು ಪ್ರತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಆಯಾ ನ್ಯಾಯಾಲಯದಲ್ಲಿ ವಿಲೇವಾರಿ ಮಾಡಲು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವಿವರಿಸಲಾಗಿದೆ.
ನ್ಯಾಯಾಲಯದ ಯುನಿಟ್ ಮುಖ್ಯಸ್ಥರು ನ್ಯಾಯಾಲಯದ ಅಂಗಳವನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಅಧಿಸೂಚನೆ ತಿಳಿಸಿದೆ. ಅಲ್ಲದೆ ಕ್ಯಾಂಟಿನ್/ ಆಹಾರ ಮಾರಾಟ ಕೇಂದ್ರಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಟೈಪಿಸ್ಟ್‌ಗಳು/ಜಾಬ್ ಟೈಪಿಸ್ಟ್‌ಗಳು, ಜೆರಾಕ್ಸ್ ಅಂಗಡಿ ಇರಿಸಿಕೊಂಡಿರುವವರು, ನೋಟರಿ/ಓತ್ ಕಮಿಷನರ್‌ಗಳಿಗೂ ನಿರ್ಬಂಧವಿದ್ದು ಅವರು ಪುನರಾವರ್ತಿತ ವಿಧಾನದಲ್ಲಿ ಶೇ 50ರ ಅನುಪಾತದಲ್ಲಿ ಪ್ರತಿದಿನ ಕಾರ್ಯ ನಿರ್ವಹಿಸಬಹುದಾಗಿದೆ.
ಅಧಿಸೂಚನೆಯನ್ನು ಇಲ್ಲಿ ಓದಿ: