Prabir Purkayastha and NewsClick 
ಸುದ್ದಿಗಳು

ನ್ಯೂಸ್‌ಕ್ಲಿಕ್‌ ಸಂಸ್ಥಾಪಕರ ಮೇಲೆ ಭಾರತದ ಉತ್ತರ ಗಡಿ ತಿರುಚಿದ ಆರೋಪ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ

ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಜನರ ಒಕ್ಕೂಟದ (ಪಿಎಡಿಎಸ್‌) ಜೊತೆಗೂಡಿ ಪ್ರಬೀರ್ ಅವರು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯನ್ನು ದಿಕ್ಕುತಪ್ಪಿಸಲು ಪಿತೂರಿ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Bar & Bench

ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಮತ್ತು ಪೋರ್ಟಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರು ವಿದೇಶಿ ನಿಧಿಯ ಮೂಲಕ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದು, ಅದರನ್ನು ಭಾರತದ ಸಮಗ್ರತೆ, ಭ್ರಾತೃತ್ವ ಮತ್ತು ಭದ್ರತೆಗೆ ಹಾನಿ ಮಾಡಲು ಬಳಕೆ ಮಾಡಿದ್ದಾರೆ ಎಂದು ದೆಹಲಿಯ ವಿಶೇಷ ಘಟಕ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

ಎಫ್‌ಐಆರ್‌ನಲ್ಲಿ ಪ್ರಬೀರ್‌, ಚಕ್ರವರ್ತಿ ಸೇರಿ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಭಾರತ ಮತ್ತು ವಿದೇಶಿ ಸಂಸ್ಥೆಗಳ ಮೂಲಕ ಅಕ್ರಮವಾಗಿ ಭಾರತಕ್ಕೆ ಹಣ ಹರಿಸಲಾಗಿದೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ. ಈ ನಿಧಿಯು ಕೋಟ್ಯಂತರ ರೂಪಾಯಿಯಷ್ಟಿದ್ದು, ನ್ಯೂಸ್‌ಕ್ಲಿಕ್‌ ಐದು ವರ್ಷಗಳ ಅವಧಿಯಲ್ಲಿ ಅದನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ.

ಪ್ರಬೀರ್‌ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಬೀರ್‌ ಪುರ್ಕಾಯಸ್ಥ, ಅಮಿತ್‌ ಸೇನಗುಪ್ತ, ದೊರೆಸ್ವಾಮಿ, ರಘುನಂದನ್‌, ಬಪ್ಪಾದಿತ್ಯ ಸಿನ್ಹಾ, ಗೌತಮ್‌ ನವಲಾಖ, ಗೀತಾ ಹರಿಹರನ್‌ ಮತ್ತು ಅಮಿತ್‌ ಚಕ್ರವರ್ತಿಯನ್ನು ಎಫ್ಐಆರ್‌ನಲ್ಲಿ ಆರೋಪಿಗಳನ್ನಾಗಿಸಲಾಗಿದೆ.  

ಪುರಕಾಯಸ್ಥ, ನೆವಿಲ್ಲೆ ರಾಯ್‌ ಸಿಂಘಮ್‌, ಗೀತಾ ಹರಿಹರನ್‌ ಮತ್ತು ಗೌತಮ್‌ ಭಾಟಿಯಾ ಅವರು‌ ಆರೋಪಿತ ಕಂಪೆನಿಗಳ ವಿರುದ್ಧ ಪ್ರಬಲ ಕಾನೂನು ಹೋರಾಟ ನಡೆಸಲು ಕಾನೂನಾತ್ಮಕ ಸಮುದಾಯ ಜಾಲವೊಂದನ್ನು ರೂಪಿಸಲು ಪ್ರಯತ್ನಿಸಿದ್ದಾರೆ ಎಂದು ವಿವರಿಸಲಾಗಿದೆ.

ನ್ಯೂಸ್‌ಕ್ಲಿಕ್‌ ಷೇರುದಾರರಾದ ನವಲಾಖ ಅವರು ನಿಷೇಧಿತ ನಕ್ಸಲ್‌ ಸಂಘಟನೆಗಳು, ಪಾಕಿಸ್ತಾನದ ಐಎಸ್‌ಐ ಜೊತೆ ಸಂಬಂಧ ಹೊಂದಿರುವವರ ಜೊತೆ ಸಂಪರ್ಕ ಹೊಂದಿದ್ದು, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

ಚೀನಾದ ಕಮ್ಯುನಿಸ್ಟ್‌ ಪಕ್ಷದ ಪ್ರಚಾರ ಇಲಾಖೆಯ ಸಕ್ರಿಯ ಸದಸ್ಯರಾದ ಸಿಂಘಮ್‌ ಮೂಲಕ ವಿವಿಧ ಸಂಸ್ಥೆಗಳ ಸಂಕೀರ್ಣ ಜಾಲವನ್ನು ಬಳಸಿ ವಿದೇಶಿ ಮೂಲದಿಂದ ಹಣವನ್ನು ಹರಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ. ಹೀಗೆ ತರಲಾದ ಹಣವನ್ನು ಪ್ರಬೀರ್‌, ಜೋಸೆಫ್‌ ರಾಜ್‌, ಅನೂಪ್‌ ಚಕ್ರವರ್ತಿ, ಬಪ್ಪಾದಿತ್ಯ ಸಿನ್ಹಾ ಮತ್ತು ಇತರರು ಅಕ್ರಮವಾಗಿ ಬೇರೆ ಮಾರ್ಗಗಳಿಗೆ ಹರಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಎಫ್‌ಐಆರ್‌ನಲ್ಲಿ ಚೀನಾದ ಕಂಪೆನಿಗಳಾದ ಶಓಮಿ ಮತ್ತು ವಿವೊ ಅಕ್ರಮ ಹಣ ವರ್ಗಾವಣೆ ಕಾಯಿದೆ, ವಿದೇಶಿ ವಿನಿಮಯ ಕಾಯಿದೆಯನ್ನು ಉಲ್ಲಂಘಿಸಿ ಸಾವಿರಾರು ಷೆಲ್‌ ಕಂಪೆನಿಗಳನ್ನು ಸೃಷ್ಟಿಸಿವೆ ಎಂದೂ ಆರೋಪಿಸಲಾಗಿದೆ.

 ಎಫ್‌ಐಆರ್‌ನಲ್ಲಿರುವ ಇತರೆ ಅಂಶಗಳು ಇಂತಿವೆ:

  • ಭಾರತದ ಉತ್ತರದ ಗಡಿಯನ್ನು ತಿರುಚಿ, ಅರುಣಾಚಲ ಮತ್ತು ಜಮ್ಮು –ಕಾಶ್ಮೀರ ಭಾರತದ ಭಾಗವಲ್ಲ ಎಂದು ತಿಳಿಸುವ ಯತ್ನವನ್ನು ಆರೋಪಿಗಳು ನಡೆಸಿದ್ದಾರೆ.

  • ದೇಶದೊಳಗಿನ ಸೇವೆಗಳು ಹಾಗೂ ಪೂರೈಕೆ ಜಾಲಗಳಲ್ಲಿ ಸಮಸ್ಯೆ ಉಂಟು ಮಾಡಲು ಯತ್ನ.

  • ರೈತರ ಹೋರಾಟದಲ್ಲಿ ಅವರಿಗೆ ಬೆಂಬಲ ಸೂಚಿಸುವ ಮೂಲಕ ಆಸ್ತಿಗೆ ಹಾನಿ ಮಾಡುವ ಪ್ರಯತ್ನ. ರೈತರ ಹೋರಾಟಕ್ಕೆ ಬೆಂಬಲಿಸಲು ವಿದೇಶಿ ನಿಧಿ ಪಡೆದಿರುವುದು. ಆಂತರಿಕವಾಗಿ ಕಾನೂನು ಸುವ್ಯವಸ್ಥೆ ಇತರೆ ಸಮಸ್ಯೆಗಳ ಸೃಷ್ಟಿಗೆ ಯತ್ನ.

  • ಕೋವಿಡ್‌ ನಿಯಂತ್ರಿಸಲು ಭಾರತ ಸರ್ಕಾರ ವಿಫಲವಾಗಿದೆ ಎಂದು ನಕಲಿ ಕಥನದ ಸೃಷ್ಟಿ.

  • ಚೀನಾದ ನಿಧಿ ಪಡೆದು ಆಂತರಿಕ ವಿಚಾರಗಳ ಕುರಿತು ಕಾಸಿಗಾಗಿ ಸುದ್ದಿ ಪ್ರಕಟ.

  • ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಜನರ ಒಕ್ಕೂಟ (ಪಿಎಡಿಎಸ್‌) ಜೊತೆಗೂಡಿ ಪ್ರಬೀರ್‌ ಪುರ್ಕಾಯಸ್ಥ ಅವರು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯನ್ನು ದಿಕ್ಕುತಪ್ಪಿಸಲು ಪಿತೂರಿ ನಡೆಸಿದ್ದರು.