Gautam Adani  X
ಸುದ್ದಿಗಳು

ಅದಾನಿ ವಿರುದ್ಧದ ಸುದ್ದಿ ಪ್ರಕಟಿಸದಂತೆ ಕೇಂದ್ರ ಸರ್ಕಾರದ ಆದೇಶ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಲಾಂಡ್ರಿ

ಅದಾನಿ ವಿರುದ್ಧದ ಸುದ್ದಿ ತೆಗೆದುಹಾಕಲು ಮತ್ತು ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯನ್ನು ಪಾಲಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ 16 ರಂದು ನ್ಯೂಸ್ ಲಾಂಡ್ರಿಗೆ ಆದೇಶಿಸಿತ್ತು.

Bar & Bench

ಉದ್ಯಮಿ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್‌) ಕುರಿತ ವಿಡಿಯೋಗಳು ಮತ್ತು ಲೇಖನಗಳನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಡಿಜಿಟಲ್ ಸುದ್ದಿ ಜಾಲತಾಣ ನ್ಯೂಸ್‌ ಲಾಂಡ್ರಿ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ನ್ಯಾಯಮೂರ್ತಿ ಸಚಿನ್ ದತ್ತ ಅವರು ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದ್ದರೂ  ಕೆಲ ಪೂರ್ವಭಾವಿ ಕಾರ್ಯಕ್ರಮಗಳಿಂದಾಗಿ ಅವರು ಅರ್ಜಿ ಆಲಿಸಲಿಲ್ಲ. ಸೆಪ್ಟೆಂಬರ್ 22 ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಅದಾನಿ ವಿರುದ್ಧದ ಲೇಖನಗಳನ್ನು ತೆಗೆದುಹಾಕಲು ಮತ್ತು ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯನ್ನು ಪಾಲಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ 16 ರಂದು ನ್ಯೂಸ್ ಲಾಂಡ್ರಿಗೆ ಆದೇಶಿಸಿತ್ತು.

ಅದಾನಿ ಸುದ್ದಿ ಪ್ರಕಟಿಸದಂತೆ ತಡೆ ನೀಡಿದ್ದ ಆದೇಶ ಪ್ರಶ್ನಿಸಿ ಹಿರಿಯ ಪತ್ರಕರ್ತ ಪರಂಜಯ್‌ ಗುಹಾ ಠಾಕೂರ್ತಾ ಅವರು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮತ್ತೊಂದು ಮನವಿಯಲ್ಲಿಯೂ ಅದಾನಿ ವಿಚಾರವಾಗಿ ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸಿದೆ ಎಂದು ಆಕ್ಷೇಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನ್ಯೂಸ್‌ಲಾಂಡ್ರಿ ವಾದವೇನು?

  • ಅದಾನಿ ಕುರಿತ ವರದಿಯಲ್ಲಿ ಅವರನ್ನು ಅವಹೇಳನ ಮಾಡಿಲ್ಲ. ಅದು ವಾಸ್ತವಾಂಶ ಆಧರಿಸಿದ ವರದಿಗಾರಿಕೆ.  

  • ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯನ್ನೂ ಮೀರಿ ಅದಾನಿ ಅವರಿಗೆ ಸಂಬಂಧಿಸಿದ ಎಲ್ಲಾ ವರದಿ ವಿಡಿಯೋ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

  • ಅದಾನಿ ಎಂಟರ್‌ಪ್ರೈಸಸ್‌ ಮತ್ತಿತರ ಖಾಸಗಿ ಕಕ್ಷಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.

  • ಕೇಂದ್ರದ ಆದೇಶ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾಡುತ್ತದೆ.

  • ಇದು ಸಂವಿಧಾನದ 19ನೇ ವಿಧಿಯಡಿ ಒದಗಿಸಲಾದ ವಾಕ್‌ಸ್ವಾತಂತ್ರ್ಯದ ಉಲ್ಲಂಘನೆ

  • ವರದಿಗಾರಿಕೆ, ವಿಡಿಯೋ ಚಿತ್ರೀಕರಣ ಸುದ್ದಿಸಂಸ್ಥೆಯ ಸಾಮಾನ್ಯ ಕರ್ತವ್ಯದ ಭಾಗ.

  • ನ್ಯಾಯಾಲಯ ನೀಡಿದ ಆದೇಶ ಜಾರಿ ನೆಪದಲ್ಲಿ ಕಾರ್ಯಾಂಗದಿಂದ ಅಧಿಕಾರ ದುರುಪಯೋಗವಾಗಿದೆ.  

  • ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕಾನೂನು, ಸಂವಿಧಾನ ಅಥವಾ ಕಾರ್ಯವಿಧಾನದ ಆಧಾರದಲ್ಲಿ ಇಲ್ಲ.

  • ಕೇಂದ್ರ ಸರ್ಕಾರದ ನಡೆ ಆಡಳಿತಾತ್ಮಕ ಉದ್ಧಟತನವಾಗಿದ್ದು ಅಸಾಂವಿಧಾನಿಕವಾಗಿದೆ.