
ಉದ್ಯಮಿ ಗೌತಮ್ ಅದಾನಿಯವರಿಗೆ ಸೇರಿದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಯಾವುದೇ ಮಾನಹಾನಿ ವಿಚಾರ ಪ್ರಕಟಿಸದಂತೆ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ಆದೇಶ ಪ್ರಶ್ನಿಸಿ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಜಿಲ್ಲಾ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
ರೋಹಿಣಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ಅವರು ಕಕ್ಷಿದಾರರ ವಾದಗಳನ್ನು ಸುದೀರ್ಘವಾಗಿ ಆಲಿಸಿ ತೀರ್ಪು ಕಾಯ್ದಿರಿಸಿದರು.
ಅದಾನಿ ಅವರ ವಿರುದ್ಧದ ಎಲ್ಲಾ ವಸ್ತುವಿಷಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳಂತಹ ಮಧ್ಯಸ್ಥ ವೇದಿಕೆಗಳಿಗೆ ಆದೇಶ ನೀಡಿರುವುದರಿಂದ ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ಠಾಕೂರ್ತಾ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್ ಪೈಸ್ ಕೋರಿದರು. ಮಾನಹಾನಿಕರವಾಗಿವೆ ಎಂದು ದೂರಲಾದ ಲೇಖನಗಳಲ್ಲಿ ಉಲ್ಲೇಖಿಸಲಾದ ಎಲ್ಲಾ ಕಂಪನಿಗಳು ಅದಾನಿಯವರಿಗೆ ಸೇರಿಲ್ಲ ಎಂದು ಪೈಸ್ ವಾದಿಸಿದರು.
ತನ್ನ ವಿರುದ್ಧದ ಲೇಖನಗಳಿಂದಾಗಿ ಭಾರತದ ಇಂಧನ ಹಿತಾಸಕ್ತಿಗಳಿಗೆ ಹಾನಿ ಉಂಟಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಎಇಎಲ್ ತನ್ನನ್ನೇ ಇಡೀ ಭಾರತ ಎಂದು ಬಿಂಬಿಸಿಕೊಳ್ಳಲು ಹೊರಟಿದೆ. ಜೊತೆಗೆ ತಡೆಯಾಜ್ಞೆ ನೀಡದೆ ಹೋದಲ್ಲಿ ಸರಿಪಡಿಸಲಾಗದಷ್ಟು ನಷ್ಟ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿಲ್ಲ. ಎಇಎಲ್ ತಪ್ಪಿತಸ್ಥ ಎಂದು ಕಂಡುಬಂದಿಲ್ಲ ಎಂದು ಆದೇಶ ಹೇಳುತ್ತದೆ ಆದರೆ ಮಾನನಷ್ಟ ಮೊಕದ್ದಮೆಯನ್ನು ಇತ್ಯರ್ಥಪಡಿಸುವ ರೀತಿ ಅದಲ್ಲ ಎಂದು ಅವರು ಹೇಳಿದರು.
ಮುಂದುವರೆದು, ಜಾಲತಾಣವೊಂದರಲ್ಲಿ ಹಲವು ಲೇಖನಗಳಿದ್ದು ಯಾವುದು ಮಾನಹಾನಿಕರವೆಂದು ತೋರುತ್ತದೋ ಅದನ್ನು ತೆಗೆದುಹಾಕುವ ಅಧಿಕಾರವನ್ನು ಎಇಎಲ್‌ಗೇ ಕೊಡಲಾಗಿದೆ. ಆ ಮೂಲಕ ಅದನ್ನು ನ್ಯಾಯಾಧೀಶರ ಸ್ಥಾನದಲ್ಲಿ ಕೂರಿಸಲಾಗಿದೆ ಎಂದರು. ಕೇಂದ್ರ ಸರ್ಕಾರವು ಪ್ರಕರಣದ ಪಕ್ಷಕಾರನಲ್ಲ ಆದರೂ ಅದು ಎಇಎಲ್ ವಿರುದ್ಧದ ವಸ್ತುವಿಷಯಗಳನ್ನು ತೆಗೆದುಹಾಕುವಂತೆ ಆದೇಶಿಸಿದ್ದು ಹೇಗೆ ಎಂತಲೂ ಅವರು ಪ್ರಶ್ನಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಠಾಕೂರ್ತಾ ಅವರ ಲೇಖನದ ವಸ್ತುವಿಷಯಗಳನ್ನು ಪರಿಶೀಲಿಸಿದ ನ್ಯಾಯಾಲಯ ಯಾವ ಸಾಲು ಮಾನಹಾನಿ ಉಂಟುಮಾಡುತ್ತಿದೆ ಎಂದು ಪ್ರಶ್ನಿಸಿತು.
ಆಗ ಅದಾನಿಯವರಿಗಾಗಿ ಮೋದಿ ಸರ್ಕಾರ ನಿಯಮಗಳನ್ನು ಬದಲಿಸಿದೆ ಎಂಬ ಸಾಲು ಮಾನಹಾನಿಕರವಾಗಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಪರ ವಾದ ಮಂಡಿಸಿದ ಅನುರಾಗ್ ಅಹ್ಲುವಾಲಿಯಾ ತಿಳಿಸಿದರು. ಹಾಗಾದರೆ, ಅದರಲ್ಲಿ ನಿಮಗೆ ಏನು ತೊಂದರೆ ಕಾಣುತ್ತಿದೆ, ಎಂದು ಈ ವೇಳೆ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅಹ್ಲುವಾಲಿಯಾ, ನಿನ್ನೆ ಅವರು ಕೇಂದ್ರ ಸರ್ಕಾರ ನಮ್ಮ (ಅದಾನಿ) ಪಾಕೆಟ್‌ನಲ್ಲಿ ಇದೆ ಎಂದು ಅವರು (ಪ್ರತಿವಾದಿಗಳು) ಹೇಳಿದ್ದರು ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ನ್ಯಾಯಾಲಯವು, "ನೀವೂ ಯಾರದಾದರೂ ಪಾಕೆಟ್‌ನಲ್ಲಿ ಇರುತ್ತೀರಿ. ಹೇಳುವವರಿಗೆ ಏನು, ಏನು ಬೇಕಾದರೂ ಹೇಳುತ್ತಾರೆ" ಎಂದು ಪ್ರತಿಕ್ರಿಯಿಸಿತು. ಇದೇ ವೇಳೆ ಅಹ್ಲುವಾಲಿಯಾ ಮತ್ತೊಂದು ವರದಿಯ ಬಗ್ಗೆಯೂ ಗಮನ ಸೆಳೆದರು.
ಅದಾನಿ ಅವರ ಪರ ವಾದ ಮಂಡಿಸಿದ ವಿಜಯ್ ಅಗರ್‌ವಾಲ್ ಅವರು ಭಯೋತ್ಪಾದನಾ ಪ್ರಕರಣವೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಠಾಕೂರ್ತಾ ಅವರ ಕುರಿತು ತನಿಖೆ ನಡೆಸುತ್ತಿದೆ ಎಂದರು. ಪೈಸ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಆಗ ನ್ಯಾಯಾಲಯ ಈ ಲೇಖನಕ್ಕೆ ಆಧಾರ ಏನು ಎಂದು ಪ್ರಶ್ನಿಸಿದರು. ಆಗ ಪೈಸ್ ಅಮೆರಿಕದ ಲೇಖನ ಸಾರ್ವಜನಿಕವಾಗಿಯೇ ಲಭ್ಯವಿದೆ ಎಂದರು. ಅದಾನಿ ಪರ ವಕೀಲರ ವಾದದ ಬಳಿಕ ನ್ಯಾಯಾಲಯ ಆದೇಶ ಕಾಯ್ದಿರಿಸಿತು.