ಡಿಜಟಲೀಕರಣದ ಪ್ರಭಾವ ಹೆಚ್ಚಿರುವ ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಎಲ್ಲಾ ಭಾರತೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾಗುವಂತೆ ಮಾಡುವೆಡೆಗೆ ಭಾರತೀಯ ನ್ಯಾಯಾಂಗ ಮುಂದಿನ ಹೆಜ್ಜೆ ಇಡಲಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ಬಳಿಕ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದ ಹಾಗೂ ಕೆಲ ತಿಂಗಳುಗಳ ಹಿಂದೆ ಸಿಜೆಐ ಹುದ್ದೆಗೇರಿದ್ದ ಅವರನ್ನು ಅಭಿನಂದಿಸುವ ಸಲುವಾಗಿ ಮುಂಬೈನಲ್ಲಿ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಲ್ಲಿ ಕೆಲಸ ಮಾಡುವ ಮದ್ರಾಸ್ ಪ್ರಾಧ್ಯಾಪಕರನ್ನು ಭೇಟಿಯಾಗಿದ್ದೇನೆ. ಮುಂದಿನ ಹಂತವೆಂದರೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳನ್ನು ನೀಡುವುದಾಗಿದೆ” ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್‌ನ ಅಧಿಕೃತ ಕಾನೂನು ವರದಿ ಕೋಶವಾದ ʼಸುಪ್ರೀಂ ಕೋರ್ಟ್ ರಿಪೋರ್ಟ್ಸ್ʼನಲ್ಲಿ ವರದಿ ಮಾಡಿರುವ ಸ್ವರೂಪದಲ್ಲಿಯೇ ಆ ತೀರ್ಪುಗಳ ಡಿಜಿಟಲ್ ಆವೃತ್ತಿಯನ್ನು ಒದಗಿಸುವ ಇ- ಎಸ್‌ಸಿಆರ್ ಯೋಜನೆಯ ಉದ್ದೇಶ ಎಲ್ಲರಿಗೂ ತೀರ್ಪು ಲಭ್ಯವಾಗುವಂತೆ ಮಾಡುವುದಾಗಿದೆ ಎಂದು ಅವರು ಹೇಳಿದರು.
"...ಪ್ರತಿಯೊಬ್ಬ ವಕೀಲರೂ ಖಾಸಗಿ ವರದಿಗಾರರನ್ನು ಪಡೆಯಲು ಸಾಧ್ಯವಿಲ್ಲ ಎಂಬ ಆಲೋಚನೆ ಇದ್ದು ತಂತ್ರಜ್ಞಾನದ ಮೂಲಕ ಮಾಹಿತಿಯ ನೀಡಲು ಇರುವ ಅಡಚಣೆ ತೆಗೆದುಹಾಕುವ ಚಿಂತನೆ ಇದೆ. ವಕೀಲರಿಗೆ ಮಾಹಿತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುವ ಕುರಿತು ಚಿಂತಿಸಲಾಗುತ್ತಿದೆ," ಎಂದು ಸಿಜೆಐ ವಿವರಿಸಿದರು.
ಆದರೆ ಮಾಹಿತಿ ಪಡೆಯುವಲ್ಲಿನ ಅಡೆತಡೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಉಚಿತವಾಗಿ ತೀರ್ಪು ದೊರೆಯುವಂತೆ ಮಾಡಿದರೆ ಸಾಲದು ಆ ತೀರ್ಪು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
“ಆಂಗ್ಲಭಾಷೆಯ ಸೂಕ್ಷ್ಮ ವ್ಯತ್ಯಾಸಗಳು ಗ್ರಾಮೀಣ ಭಾಗದ ವಕೀಲರಿಗೆ ಸಹಾಯಕವಾಗದು ಹಾಗಾಗಿ ಎಲ್ಲರಿಗೂ ಮಾಹಿತಿ ಲಭ್ಯವಾಗುವಂತೆ ಮಾಡುವ ಆಲೋಚನೆ ಇದೆ” ಎಂದು ಅವರು ಹೇಳಿದರು.
ಕಾನೂನು ಶಿಕ್ಷಣ ಮತ್ತು ವೃತ್ತಿಯಲ್ಲಿ ಅನೇಕ ತೊಡಕುಗಳಿರುವುದನ್ನು ಸಿಜೆಐ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇಂಗ್ಲಿಷ್ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಮಾತ್ರ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಕೀಲ ವೃತ್ತಿ ಪ್ರವೇಶಿಸುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಈ ಅಂತರವನ್ನು ಕಡಿಮೆ ಮಾಡಲು ಜ್ಞಾನ ವೇದಿಕೆಗಳು ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಕಿರಿಯ ವಕೀಲರಿಗೆ ವಕೀಲರು ಉತ್ತಮ ವೇತನ ನೀಡಬೇಕು. ಆಗ ಮಾತ್ರ ವಕೀಲ ಸಮುದಾಯ ಪ್ರಜಾಸತ್ತಾತ್ಮಕವಾಗುತ್ತದೆ ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಾಕ್ಟೀಸ್ ಕೈಪಿಡಿಯನ್ನು ಕೂಡ ಅನಾವರಣಗೊಳಿಸಲಾಯಿತು, ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್ತು ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಪುಸ್ತಕ ಹೊರತಂದಿದೆ. ಸಿವಿಲ್ ಡ್ರಾಫ್ಟ್‌ಗಳು, ಕ್ರಿಮಿನಲ್ ದೂರುಗಳು ಹಾಗೂ ಡೀಡ್‌ಗಳನ್ನು ಒಳಗೊಂಡ 1000 ಕರಡುಗಳನ್ನು ಹೊಂದಿರುವ ವೆಬ್ ಬ್ಯಾಂಕ್ ಕೂಡ ಕೈಪಿಡಿಯಲ್ಲಿ ಲಭ್ಯವಿದೆ. ಸುಪ್ರೀಂ ಕೋರ್ಟ್ ನ್ಯಾ. ಬಿ ಆರ್ ಗವಾಯಿ ಬಾಂಬೆ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.