ಸಿಜೆಐ ಆಗಿ ಡಿ ವೈ ಚಂದ್ರಚೂಡ್‌ ನೇಮಕ ಪ್ರಶ್ನಿಸಿ ಅರ್ಜಿ: ವಿಚಾರಣೆಯಿಂದ ಹಿಂಸರಿದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ

ಜನವರಿ 16ರಂದು ಹೈಕೋರ್ಟ್‌ನ ಬೇರೊಂದು ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.
Chief Justice Satish Chandra Sharma and Justice Subramonium Prasad
Chief Justice Satish Chandra Sharma and Justice Subramonium Prasad
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್‌ರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ಸುಬ್ರಮೊಣಿಯಮ್‌ ಪ್ರಸಾದ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಹಿಂದೆ ಸರಿದಿದೆ.

ಹೀಗಾಗಿ, ಜನವರಿ 16ರಂದು ಹೈಕೋರ್ಟ್‌ನ ಬೇರೊಂದು ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ. 2022ರ ನವೆಂಬರ್‌ 11ರಂದು ಸಿಜೆಐ ಚಂದ್ರಚೂಡ್‌ ಅವರ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಈ ಆದೇಶ ಮರುಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿ ಇದಾಗಿದೆ.

ಸಿಜೆ ಶರ್ಮಾ ಮತ್ತು ನ್ಯಾ. ಪ್ರಸಾದ್‌ ಅವರ ನೇತೃತ್ವದ ವಿಭಾಗಿಯ ಪೀಠವೇ ಅಂದು ಅರ್ಜಿಯನ್ನು ತಿರಸ್ಕರಿಸಿತ್ತು. ಅದೇ ಪೀಠವು ಈಗ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದೆ.

ಗ್ರಾಮ್‌ ಉದಯ್‌ ಫೌಂಡೇಶನ್‌ ಅಧ್ಯಕ್ಷ ಸಂಜೀವ್‌ ಕುಮಾರ್‌ ತಿವಾರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ ಆದೇಶಿಸಿದ್ದ ವಿಭಾಗೀಯ ಪೀಠವು ಅವರಿಗೆ ₹1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈ ವೇಳೆ ನ್ಯಾಯಾಲಯವು “ಅರ್ಜಿದಾರರ ಸಲ್ಲಿಸಿದ್ದ ಇದೇ ರೀತಿಯ ಮನವಿಯನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ವಜಾ ಮಾಡಿದೆ. ಅದಾಗ್ಯೂ, ಅರ್ಜಿದಾರರು ಹೈಕೋರ್ಟ್‌ ಕದ ತಟ್ಟಿದ್ದಾರೆ” ಎಂದಿತ್ತು. ಈ ಆದೇಶ ಮರುಪರಿಶೀಲಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com