Supreme Court and Bihar Map  
ಸುದ್ದಿಗಳು

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂಗೆ ಎನ್‌ಜಿಒ ಅರ್ಜಿ

ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಮತ್ತು ಪಡಿತರ ಚೀಟಿಗಳಂತಹ ಸಾಮಾನ್ಯ ಬಳಕೆಯಲ್ಲಿರುವ ದಾಖಲೆಗಳನ್ನು ಕೈಬಿಟ್ಟಿರುವ ಬಗ್ಗೆ ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Bar & Bench

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲು ಭಾರತೀಯ ಚುನಾವಣಾ ಆಯೋಗ ಕೈಗೊಂಡ ನಿರ್ಧಾರ ಪ್ರಶ್ನಿಸಿ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಬಿಹಾರದ ಬಹುತೇಕ ಮತಾದಾರರು ತಾವು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎನ್ನುವುದಾದರೆ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಆಯೋಗ ಜೂನ್ 24ರಂದು ಆದೇಶ ಹೊರಡಿಸಿದೆ. ಈ ಆದೇಶವನ್ನುಆಕ್ಷೇಪಿಸಿ ಸಂವಿಧಾನದ 32ನೇ ವಿಧಿಯ ಅಡಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಾಗಿದೆ.

ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳು, 1950ರ ಪ್ರಜಾ ಪ್ರತಿನಿಧಿ ಕಾಯಿದೆ ಹಾಗೂ 1960ರ ಮತದಾರರ ನೋಂದಣಿ ನಿಯಮ 21 ಎ ಸೆಕ್ಷನ್‌ಗಳನ್ನು ಆಯೋಗ ಉಲ್ಲಂಘಿಸಿದೆ ಎಂದು ಅರ್ಜಿ ದೂರಿದೆ. ವಕೀಲ ಪ್ರಶಾಂತ್‌ ಭೂಷಣ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಈ ಆದೇಶ ಹೊಸ ದಾಖಲೆಗಳನ್ನು ನೀಡಬೇಕು ಎಂದು ಆದೇಶಿಸುತ್ತದೆ. ಪುರಾವೆಯ ಹೊರೆಯನ್ನು ಪ್ರಭುತ್ವದ ಬದಲು ನಾಗರಿಕರಿಗೆ ವರ್ಗಾಯಿಸಿದೆ.

  • ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಮತ್ತು ಪಡಿತರ ಚೀಟಿಗಳಂತಹ ಸಾಮಾನ್ಯ ಬಳಕೆಯಲ್ಲಿರುವ ದಾಖಲೆಗಳನ್ನು ಕೈಬಿಟ್ಟಿದ್ದು ಇದರಿಂದ ಬಡವರು ಮತ್ತು ಸಮಾಜದಂಚಿನಲ್ಲಿರುವ ಮತದಾರರು ಅದರಲ್ಲಿಯೂ ಗ್ರಾಮೀಣ ಬಿಹಾರದ ಮೇಲೆ ಅಸಮಾನ ರೀತಿಯ ಪರಿಣಾಮ ಬೀರಲಿದೆ.

  • ಕಡಿಮೆ ಕಾಲಾವಧಿ ಹೊಂದಿರುವುದರಿಂದ ಅಪೇಕ್ಷಿತ ದಾಖಲೆ ಒದಗಿಸಲಾಗದ ಸುಮಾರು ಮೂರು ಕೋಟಿ ನೈಜ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದು ಅವರ ಮತದಾರರ ಹಕ್ಕು ಕಸಿದುಕೊಂಡಂತಾಗುತ್ತದೆ.

  • 2003ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದ ಮತದಾರರು ಇದೀಗ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

  • ಡಿಸೆಂಬರ್ 2004ರ ನಂತರ ಜನಿಸಿದವರು ತಮ್ಮ ಸ್ವಂತ ದಾಖಲೆಗಳನ್ನು ಮಾತ್ರವಲ್ಲದೆ ಇಬ್ಬರೂ ಪೋಷಕರ ದಾಖಲೆಗಳನ್ನುಕೂಡ ಕಡ್ಡಾಯವಾಗಿ ನೀಡಬೇಕು ಎನ್ನುತ್ತದೆ. ಪೋಷಕರು ವಿದೇಶಿ ಪ್ರಜೆಯಾಗಿದ್ದರೆ, ಅರ್ಜಿದಾರರ ಜನನದ ಸಮಯದಲ್ಲಿನ ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಕೇಳುತ್ತದೆ.

  • ಬಿಹಾರದ ರೀತಿಯ ರಾಜ್ಯದಲ್ಲಿ ಜನನ ನೋಂದಣಿ ಐತಿಹಾಸಿಕವಾಗಿ ಕೆಳಮಟ್ಟದಲ್ಲಿದ್ದು ಅನೇಕ ಮತದಾರರಿಗೆ ಅಧಿಕೃತ ದಾಖಲೆಗಳು ಲಭ್ಯವಿಲ್ಲದೆ ಇರುವುದರಿಂದ ಆಯೋಗದ ಇಂತಹ ಬೇಡಿಕೆ ಅವಾಸ್ತವಿಕ.

  • ಹೀಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಕಾರಣ ಏನು ಎಂಬುದನ್ನು ವಿವರಿಸಿಲ್ಲ.