Dal Lake 
ಸುದ್ದಿಗಳು

ದಾಲ್ ಸರೋವರದಲ್ಲಿ ಮಾಲಿನ್ಯ ತಡೆ ಹಾಗೂ ಹೌಸ್‌ಬೋಟ್‌ಗಳಿಗೆ ಲಗಾಮು: ಸಮಿತಿ ರಚಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಚರಂಡಿ ನೀರು ಹಾಗೂ ವಿವಿಧ ಮಾಲಿನ್ಯಕಾರಕಗಳಿಂದಾಗಿ ದಾಲ್ ಸರೋವರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.

Bar & Bench

ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್ ಸರೋವರದ ಮಾಲಿನ್ಯಕ್ಕೆ ಕಡಿವಾಣ ಹಾಕಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಧಿಕಾರಿಗಳ ಮಟ್ಟದ ಜಂಟಿ ಸಮಿತಿಯೊಂದನ್ನು ರಚಿಸಿದೆ.

ಹೌಸ್‌ಬೋಟ್‌ಗಳಿಗೆಂದು ಪರಿಸರ ನಿರ್ವಹಣಾ ಮಾರ್ಗಸೂಚಿ ಸಿದ್ಧಪಡಿಸುವಂತೆ ಈ ಸಮಿತಿಗೆ ನ್ಯಾಯಮೂರ್ತಿ  ಪ್ರಕಾಶ್ ಶ್ರೀವಾಸ್ತವ , ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ  ಅರುಣ್ ಕುಮಾರ್ ತ್ಯಾಗಿ  ಮತ್ತು ತಜ್ಞ ಡಾ  ಎ ಸೆಂಥಿಲ್ ವೇಲ್  ಅವರನ್ನೊಳಗೊಂಡ ಪೀಠ  ಸೂಚಿಸಿದೆ.

ಮಾಲಿನ್ಯದ ಮೂಲ ಪತ್ತೆ ಹಚ್ಚಿ ಅದಕ್ಕೆ ಕಾರಣವಾದ ವ್ಯಕ್ತಿ ಇಲ್ಲವೇ ಘಟಕಗಳನ್ನು ಕಂಡುಹಿಡಿದು ಸಮಿತಿ ಸೂಕ್ತ ಪರಿಹಾರ ಮತ್ತು ದಂಡನಾತ್ಮಕ ಕ್ರಮಗಳಿಗೆ ಮುಂದಾಗಬೇಕು ಎಂದು ಕೂಡ ಮಂಡಳಿ ಆಗಸ್ಟ್ 21ರ ಆದೇಶದಲ್ಲಿ ತಿಳಿಸಿದೆ.

ಚರಂಡಿ ನೀರು ಹಾಗೂ ವಿವಿಧ ಮಾಲಿನ್ಯಕಾರಕಗಳಿಂದಾಗಿ ದಾಲ್ ಸರೋವರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.

ʼದಿ ವೈರ್‌ʼಸುದ್ದಿತಾಣದಲ್ಲಿ ಪ್ರಕಟವಾಗಿದ್ದ ದಾಲ್‌ ಲೇಕ್‌ ಕುರಿತ ವರದಿ ಆಧರಿಸಿ ನ್ಯಾಯಮಂಡಳಿ ಮೊಕದ್ದಮೆ ದಾಖಲಿಸಿಕೊಂಡಿತ್ತು.  ಜಮ್ಮು ಮತ್ತು ಕಾಶ್ಮೀರ ಮಾಲಿನ್ಯ ನಿಯಂತ್ರಣ ಸಮಿತಿ (ಜೆ & ಕೆಪಿಸಿಸಿ) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗೆ ಮೇ 8 ರಂದು ನೋಟಿಸ್‌ ಕೂಡ ನೀಡಿತ್ತು.

ಸಂಸ್ಕರಿಸದ ಒಳಚರಂಡಿ ಸೇರಿದಂತೆ ಮಾಲಿನ್ಯಕಾರಕಗಳು ದಾಲ್ ಸರೋವರವನ್ನು ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ತ್ವರಿತ ಪರಿಹಾರ ಕ್ರಮದ ಅಗತ್ಯವಿದೆ ಎಂದು ಎನ್‌ಜಿಟಿ ನಿರ್ಧರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 2, 2024ರಂದು ನಡೆಯಲಿದೆ.