ದೆಹಲಿಯ ಪಹಾಡ್‌ಗಂಜ್‌ನ 536 ಹೋಟೆಲ್‌ಗಳು ಅಕ್ರಮವಾಗಿ ಅಂತರ್ಜಲ ಬಳಕೆ ಮಾಡುತ್ತಿದ್ದು ಇದನ್ನು ಪರಿಶೀಲಿಸುವುದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಎಗೆ ಜಂಟಿ ಸಮಿತಿಯೊಂದನ್ನು ರಚಿಸಿದೆ [ವರುಣ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಉಪ ವಿಭಾಗಾಧಿಕಾರಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ). ನೀಡಿದ್ದ ನೀಡಿದ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದ 330 ಹೋಟೆಲ್‌ಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್ ಮತ್ತು ಸುಧೀರ್ ಅಗರ್ವಾಲ್, ತಜ್ಞ ಸದಸ್ಯರಾದ ಪ್ರೊ.ಎ ಸೆಂಥಿಲ್ ವೇಲ್ ಮತ್ತು ಡಾ. ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ಪೀಠ ದಾಖಲಿಸಿಕೊಂಡಿತು.
ಅಕ್ರಮ ಬಳಕೆದಾರರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ ಹಿಂಪಡೆಯಲಾಗಿದ್ದು ಕಾನೂನು ಮತ್ತು ಪರಿಸರ ನಿಯಮಗಳ ಉಲ್ಲಂಘನೆಗೆ ಕ್ರಮ ಕೈಗೊಂಡಿಲ್ಲ ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಸಮಸ್ಯೆಗೆ ಸಂಬಂಧಿಸಿದಂತೆ ಹಿಂದಿನ ಆದೇಶ ಜಾರಿಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಎನ್‌ಜಿಟಿ ವಿಚಾರಣೆ ನಡೆಸಿತು. ಮೂಲ ಅರ್ಜಿಯಲ್ಲಿ 536 ಹೋಟೆಲ್‌ಗಳ ವಿರುದ್ಧ ತಡೆಯಾಜ್ಞೆ ಕೋರಲಾಗಿತ್ತು.
ಬಹುಕಾರಣಗಳನ್ನು ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಅರ್ಜಿ ಕೋರಿರುವುದರಿಂದ ಅರ್ಜಿಯನ್ನು ಅನುಮತಿಸಲಾಗದು ಎಂದಿದ್ದ ಎನ್‌ಜಿಟಿ, ಉಪ ವಿಭಾಗಾಧಿಕಾರಿ ಅಥವಾ ದೆಹಲಿ ಮುಖ್ಯ ಕಾರ್ಯದರ್ಶಿಗಳಿಗೆ ಅಹವಾಲು ಸಲ್ಲಿಸಲು ಅನುಮತಿಸಿತ್ತು.
ಏಪ್ರಿಲ್ 13 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದಷ್ಟೇ ಹೇಳಿದ್ದ ಕಾರಣ ತನ್ನ ಹಿಂದಿನ ಆದೇಶವನ್ನು ಕಾರ್ಯಗತಗೊಳಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟನೆ ನೀಡಿತು.