ಉತ್ತರ ಪ್ರದೇಶದ ನೋಯ್ಡಾದಲ್ಲಿ ನೀರು ತುಂಬಿದ ಹೊಂಡಕ್ಕೆ ಕಾರು ಬಿದ್ದು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ ಘಃಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಗುರುವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಟೈಮ್ಸ್ ಆಫ್ ಇಂಡಿಯಾ ಜನವರಿ 20 ರಂದು ಪ್ರಕಟಿಸಿದ್ದ ಸುದ್ದಿಯನ್ನು ಗಣನೆಗೆ ತೆಗೆದುಕೊಂಡ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರಿವಾಸ್ತವ್ ತಜ್ಞ ಸದಸ್ಯ ಎ ಸೆಂತಿಲ್ ವೇಲ್ ಅವರಿದ್ದ ಪೀಠ ಮಳೆನೀರಿನ ನಿರ್ವಹಣೆ ಮತ್ತು ಪರಿಸರ ನಿಯಮಾವಳಿ ಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದಿತು.
1986ರ ಪರಿಸರ (ರಕ್ಷಣೆ) ಕಾಯಿದೆ ಮೇಲ್ನೋಟಕ್ಕೆ ಉಲ್ಲಂಘನೆಯಾಗಿರುವುದನ್ನು ಪ್ರಕರಣ ಸೂಚಿಸುತ್ತದೆ. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಘಟನೆಗೆ ಕಾರಣ ಎಂದು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
ಪರಿಸರ ನಿಯಮಾವಳಿ ಪಾಲನೆ ಮತ್ತು ಕಾನೂನು ಜಾರಿಗೆ ಸಂಬಂಧಿಸಿದಂತೆ ಅನುಪಾಲನೆಯಲ್ಲಿನ ಸಮಸ್ಯೆಗಳ ಕುರಿತು ಪತ್ರಿಕಾ ವರದಿಯು ಬೆರಳು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಘಟನೆಯು ಮಳೆ ನೀರು ನಿರ್ವಹಣೆ ಮತ್ತು ನಿಯಂತ್ರಣ ಪಾಲನೆಗೆ ಸಂಬಂಧಿಸಿದ ಪರಿಸರಾತ್ಮಕ ಆತಂಕ ಹುಟ್ಟುಹಾಕಿದೆ ಎಂದಿರುವ ಅದು ಉತ್ತರ ಪ್ರದೇಶ ಸರ್ಕಾರ, ನೋಯ್ಡಾ ಪ್ರಾಧಿಕಾರ ಮತ್ತಿತರರಿಂದ ಪ್ರತಿಕ್ರಿಯೆ ಕೇಳಿದೆ.
ನೊಯ್ಡಾದ 150ನೇ ಸೆಕ್ಟರ್‌ನಲ್ಲಿ ಟೆಕಿ ಯುವರಾಜ್ ಮೆಹ್ತಾ ದಟ್ಟವಾದ ಮಂಜಿನಲ್ಲಿ ಕಾರು ಚಾಲನೆ ಮಾಡುವ ವೇಳೆ ಬಲಕ್ಕೆ ತಿರುವು ತೆಗೆದುಕೊಳ್ಳುವಾಗ ಕಾರು ನೀರು ತುಂಬಿದ ಹೊಂಡಕ್ಕೆ ಬಿದ್ದು ಮುಳುಗಿದ ಪರಿಣಾಮ ಸಾವನ್ನಪ್ಪಿದ್ದರು. ಸ್ಥಳವನ್ನು ಮೂಲತಃ ಖಾಸಗಿ ಮಾಲ್ ಯೋಜನೆಗೆ ನೀಡಲಾಗಿತ್ತು. ಕಟ್ಟಡ ನಿರ್ಮಣಕ್ಕೆಂದು ಅಗೆದಿದ್ದ ಜಾಗವನ್ನು ವರ್ಷಗಳ ಕಾಲ ಮುಚ್ಚದೆ ಇದ್ದ ಪರಿಣಾಮ ಕಾಲಾನಂತರದಲ್ಲಿ, ಹತ್ತಿರದ ವಸತಿ ಸಮುಚ್ಛಯಗಳಿಂದ ಹರಿದು ಬರುವ ನೀರು, ಮಳೆನೀರು ಮತ್ತು ತ್ಯಾಜ್ಯ ನೀರು ಆ ಸ್ಥಳದಲ್ಲಿ ಮಡುಗಟ್ಟಿತ್ತು.
2015ರಲ್ಲೇ ಮಳೆ ನೀರು ನಿರ್ವಹಣೆಗೆಯೋಜನೆ ರೂಪಿಸಿದ್ದರೂ ಅದನ್ನು ಅಧಿಕಾರಿಗಳು ಜಾರಿಗೆ ತರಲಿಲ್ಲ. ಇದರಿಂದ ಮಳೆ ಬಂದಾಗ ಆ ಪ್ರದೇಶದಲ್ಲಿ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು.
ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ನೋಯ್ಡಾ ಪ್ರಾಧಿಕಾರ ಕ್ರಮ ಕೈಗೊಂಡಿರಲಿಲ್ಲ ಎಂದು ಎನ್‌ಜಿಟಿ ಹೇಳಿದ್ದು ಅಧಿಕಾರಿಗಳ ಈ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣೆ ಎಂದಿದೆ.
ಈ ಹಿನ್ನೆಲೆಯಲ್ಲಿ ನೋಯ್ಡಾ ಪ್ರಾಧಿಕಾರ, ಉತ್ತರ ಪ್ರದೇಶ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಐದು ಪ್ರಾಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿರುವ ಅದು ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ನಿಗದಿಪಡಿಸಿದೆ.