Gaus Mohammed & Riyaz  
ಸುದ್ದಿಗಳು

ಉದಯಪುರ ಹತ್ಯೆ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ಎನ್ಐಎ

ಆರೋಪಿಗಳು 2022ರ ಜೂನ್ 28 ರಂದು ಸ್ಥಳೀಯ ಟೈಲರ್ ಕನ್ಹಯ್ಯ ಲಾಲ್ ತೇಲಿಯನ್ನು ಹಾಡಹಗಲೇ ಕೊಲೆ ಮಾಡಿದ್ದರು.

Bar & Bench

ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 29, 2022 ರಂದು ರಾಜಸ್ಥಾನದ ಉದಯಪುರದ ಧನ್ಮಂಡಿ ಜಿಲ್ಲೆಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ತರುವಾಯ ತನಿಖೆಯ ನೇತೃತ್ವ ವಹಿಸಿಕೊಳ್ಳುವಂತೆ ಗೃಹ ಸಚಿವಾಲಯ ಎನ್‌ಐಎಗೆ ನಿರ್ದೇಶಿಸಿತ್ತು.

“ಯಾವುದೇ ಸಂಘಟನೆ ಶಾಮೀಲಾಗಿರುವ ಬಗ್ಗೆ ಮತ್ತು ಅಂತರರಾಷ್ಟ್ರೀಯ ನಂಟಿನ ಬಗ್ಗೆ ಸಂಪೂರ್ಣ ತನಿಖೆ ಮಾಡಲಾಗುತ್ತದೆ” ಎಂದು ಗೃಹ ಸಚಿವಾಲಯ ಟ್ವೀಟ್‌ ಮಾಡಿದೆ.

ಐಪಿಸಿ ಸೆಕ್ಷನ್ 34, 452 (ಮನೆ-ಅತಿಕ್ರಮಣ), 302 (ಕೊಲೆ), 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 153 (ಬಿ) (ರಾಷ್ಟ್ರೀಯ ಏಕತೆಗೆ ಧಕ್ಕೆ), 295 (ಎ) ( ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು 2022ರ ಜೂನ್ 28ರಂದು ಸ್ಥಳೀಯ ಟೈಲರ್ ಕನ್ಹಯ್ಯ ಲಾಲ್ ತೇಲಿಯನ್ನು ಹಾಡಹಗಲೇ ಕೊಲೆ ಮಾಡಿದ್ದರು. ಅಲ್ಲದೆ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನು ಪ್ರಚುರಪಡಿಸಿದ್ದಕ್ಕಾಗಿ ತೇಲಿ ಕೊಲೆ ನಡೆದಿದೆ ಎಂದು ಆರೋಪಿಗಳು ಫೇಸ್‌ಬುಕ್‌ ವೀಡಿಯೊದಲ್ಲಿ ಹೇಳಿಕೊಂಡಿದ್ದರು.