Sachin Waze
Sachin Waze 
ಸುದ್ದಿಗಳು

ದೇಶ್‌ಮುಖ್‌‌ ಪ್ರಕರಣ: ವಜೆ ಪ್ರಶ್ನಿಸಲು ಸಿಬಿಐಗೆ ಅನುಮತಿಸಿದ ಎನ್‌ಐಎ ನ್ಯಾಯಾಲಯ

Bar & Bench

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಜೆ ಅವರನ್ನು ತನಿಖೆಗೆ ಒಳಪಡಿಸುವ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಅನುಮತಿ ಕೋರಿ ಸಲ್ಲಿಸಿದ್ದ ಮನವಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಒಪ್ಪಿಗೆ ನೀಡಿದೆ.

ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರ ಮನವಿಯ ಕುರಿತು ಬಾಂಬೆ ಹೈಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಆರೋಪಗಳ ಪ್ರಾಥಮಿಕ ತನಿಖೆಯನ್ನು ಸಿಬಿಐ ಆರಂಭಿಸಿದೆ. ಇದರ ಬೆನ್ನಿಗೇ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ವಜೆ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಮನವಿಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಇ ಕೋಥಲಿಕರ್‌ ಅವರಿದ್ದ ಪೀಠವು ಸಮ್ಮತಿಸಿದೆ. ಅಲ್ಲದೇ ಎನ್‌ಐಎ ನ್ಯಾಯಾಲಯವು ವಜೆ ಅವರ ಕಸ್ಟಡಿ ಅವಧಿಯನ್ನು ಏಪ್ರಿಲ್‌ 9ರ ವರೆಗೆ ವಿಸ್ತರಿಸಿದೆ.

ಎನ್‌ಐಎ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ವಜೆ ಅವರ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ಕಾಲ ಹೆಚ್ಚಿಸುವಂತೆ ಕೋರಿದರು. ಜನರ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಿಲು ವಜೆ ಪ್ರಯತ್ನಿಸಿದರು ಎಂದು ಸಿಂಗ್‌ ಪುನರುಚ್ಚರಿಸಿದರು. “ಇದಕ್ಕಿಂತ ದೊಡ್ಡ ಆರೋಪ ಮತ್ತೊಂದಿರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಎನ್‌ಐಎ ಪ್ರಕರಣದ ವಿಚಾರಣೆ ಕೈಗೆತ್ತುಕೊಂಡಿದೆ” ಎಂದರು.

ಹಿಂದಿನ ವಿಚಾರಣೆಯಿಂದ ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸಿಂಗ್‌ ಅವರು ನ್ಯಾಯಾಲಯದ ಗಮನಕ್ಕೆ ತಂದರು. ವಜೆ ಅವರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಪತ್ತೆಯಾಗಿದ್ದು, ಅದರಲ್ಲಿ ಸುಮಾರು 1.5 ಕೋಟಿ ರೂಪಾಯಿ ಪತ್ತೆಯಾಗಿದೆ ಎಂದಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ವಜೆ ಸಹಚರ ನೀಡಿದ ಹೇಳಿಕೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ. ತನಗೂ ವಜೆ ಅವರು 80 ಲಕ್ಷ ರೂಪಾಯಿ ನೀಡಿರುವುದಾಗಿ ಸಹಚರ ತಿಳಿಸಿದ್ದಾನೆ. ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು. ಇದನ್ನು ಸುಲಿಗೆ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಮಾಡುವುದು ಎನ್‌ಐಎಗೆ ಬಹುಮುಖ್ಯವಾಗಿದೆ ಎಂದು ಸಿಂಗ್‌ ವಾದಿಸಿದ್ದಾರೆ.

ಆರೋಪಿತ ಸಹ ಪಿತೂರಿಗಾರನಾದ ಹಿರೇನ್‌ ಮನ್ಸುಖ್‌ ನಾಪತ್ತೆಯನ್ನೂ ತನಿಖೆ ಮಾಡುವ ಅಗತ್ಯವಿದೆ. “ವಜೆ ಅವರಿಂದ ಮಾಹಿತಿ ಪಡೆಯುವುದು ಅಥವಾ ಅವರನ್ನು ವಿಚಾರಣೆಗೆ ಒಳಪಡಿಸುವುದು ಅಷ್ಟು ಸುಲಭವಲ್ಲ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಪೊಲೀಸ್‌ ಅಧಿಕಾರಿ ಅವರಾಗಿದ್ದಾರೆ” ಎಂದು ಸಿಂಗ್‌ ಹೇಳಿದ್ದಾರೆ.

ನಮ್ಮ ಕಕ್ಷಿದಾರರಾದ ವಜೆ ಅವರನ್ನು ಎನ್‌ಐಎ ಕಸ್ಟಡಿಗೆ ನೀಡಿರುವುದಕ್ಕೆ ತಗಾದೆ ಇಲ್ಲ ಅಥವಾ ಸಿಬಿಐ ವಿಚಾರಣೆಗೆ ಒಳಪಡಿಸಿರುವುದಕ್ಕೂ ಸಮಸ್ಯೆ ಇಲ್ಲ ಎಂದು ವಜೆ ಪರ ಹಿರಿಯ ವಕೀಲ ಅಬಾದ್‌ ಪಂಡಾ ಹೇಳಿದ್ದಾರೆ. “ನಾನು ಎನ್‌ಐಎಯೊಂದಿಗೆ ನಡೆದುಕೊಂಡಂತೆ, ಪೊಲೀಸ್ ಕಸ್ಟಡಿಯಲ್ಲಿ ಉಳಿಯುವುದು ಮತ್ತು ಸಿಬಿಐನೊಂದಿಗೆ ಸಹಕರಿಸುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ, ಇದು ನನ್ನ ಹಿತಾಸಕ್ತಿಯ ಪರವಾಗಿಯೇ ಇದೆ" ಎಂದಿದ್ದಾರೆ. ಉಭಯಪಕ್ಷಗಳ ವಾದಗಳನ್ನು ಆಲಿಸಿದ ಪೀಠವು ವಜೆ ಅವರ ಕಸ್ಟಡಿಯನ್ನು ಎರಡು ದಿನಗಳ ಕಾಲ ವಿಸ್ತರಿಸಿದೆ.