ದೇಶ್‌ಮುಖ್‌ ಪ್ರಕರಣ‌: ತನಿಖೆ ನಡೆಸಲು ಸಿಬಿಐಗೆ 15 ದಿನ ಕಾಲಾವಕಾಶ ನೀಡಿದ ಬಾಂಬೆ ಹೈಕೋರ್ಟ್‌; ರಾಜೀನಾಮೆ ನೀಡಿದ ಸಚಿವ

“ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕ ಸಿಬಿಐ ನಿರ್ದೇಶಕರು ಮುಂದಿನ ಕಾರ್ಯಾಚರಣೆ ಕುರಿತು ನಿರ್ಧರಿಸಬಹುದು” ಎಂದು ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠ ಹೇಳಿದೆ. ಹೈಕೋರ್ಟ್‌ ಆದೇಶದ ಬೆನ್ನಿಗೇ ಅನಿಲ್‌ ದೇಶ್‌ಮುಖ್ ರಾಜೀನಾಮೆ ನೀಡಿದ್ದಾರೆ. ‌
Anil Deshmukh, Param Bir Singh
Anil Deshmukh, Param Bir Singh

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್ಮುಖ್‌ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಹೊರಿಸಿದ್ದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಲು ಬಾಂಬೆ ಹೈಕೋರ್ಟ್‌ ಸೋಮವಾರ ಅನುಮತಿಸಿದೆ. ಇದರ ಬೆನ್ನಿಗೇ ಅನಿಲ್‌ ದೇಶ್‌ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಉನ್ನತ ಮಟ್ಟದ ಸಮಿತಿಯಿಂದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರವು ಈಗಾಗಲೇ ಕ್ರಮಕೈಗೊಂಡಿರುವುದರಿಂದ ಸಿಬಿಐ ತಕ್ಷಣಕ್ಕೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಹದಿನೈದು ದಿನಗಳ ಒಳಗೆ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿರುವ ಹೈಕೋರ್ಟ್‌, ಆ ಬಳಿಕ ಮುಂದಿನ ಕಾರ್ಯಾಚಾರಣೆಯ ಕುರಿತು ಸಿಬಿಐ ನಿರ್ಧರಿಸಬಹುದು ಎಂದಿದೆ.

“ಸಿಬಿಐ ನಿರ್ದೇಶಕರು ಕಾನೂನಿನ ಅನ್ವಯ ಪ್ರಾಥಮಿಕ ತನಿಖೆ ನಡೆಸಬೇಕಿದ್ದು, ಅದು 15 ದಿನಗಳ ಒಳಗೆ ಪೂರ್ಣಗೊಳ್ಳಬೇಕು. ಒಮ್ಮೆ ಪ್ರಾಥಮಿಕ ತನಿಖೆ ಪೂರ್ಣಗೊಂಡರೆ ಆನಂತರ ಮುಂದಿನ ಕಾರ್ಯಾಚರಣೆಯ ಬಗ್ಗೆ ಸಿಬಿಐ ನಿರ್ಧರಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ವಾದಿ-ಪ್ರತಿವಾದಿಗಳನ್ನು ಸುದೀರ್ಘವಾಗಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಕಳೆದ ಬುಧವಾರ ತೀರ್ಪು ಕಾಯ್ದಿರಿಸಿತ್ತು.

“ಅರ್ಜಿ ನಿರ್ವಹಣೆಯ ಇತರೆ ವಿಚಾರಗಳಲ್ಲಿ ಹಸ್ತಕ್ಷೇಪಿಸಲು ನಮಗೆ ಇಚ್ಛೆಯಿಲ್ಲ… ಉನ್ನತ ಮಟ್ಟದ ಸಮಿತಿಗೆ ಸಂಬಂಧಿಸಿದಂತೆ ಸರ್ಕಾರವು ನಿರ್ಣಯ ಕೈಗೊಂಡು (ಜಿಆರ್) ಅನುಮತಿಸಿರುವುದರಿಂದ ಮಧ್ಯಪ್ರವೇಶದ ಅವಶ್ಯಕತೆ ಬೀಳುವುದಿಲ್ಲ ಎಂದು ನಮಗೆ ಅನ್ನಿಸುತ್ತದೆ…” ಎಂದು ಪೀಠ ಹೇಳಿದೆ. ಆರೋಪಗಳು ಗಂಭೀರ ಸ್ವರೂಪದವಾಗಿದ್ದು, ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ಸಿಂಗ್‌ ವರ್ಸಸ್‌ ದೇಶಮುಖ್‌ 'ಗಂಭೀರ ಪ್ರಕರಣ', ಮೊದಲಿಗೆ ಬಾಂಬೆ ಹೈಕೋರ್ಟ್‌ ಸಂಪರ್ಕಿಸಿ: ಪರಮ್‌ಗೆ ಸುಪ್ರೀಂ ಸೂಚನೆ

“ಇದೊಂದು ಅಸಾಧಾರಣ ಪ್ರಕರಣ ಎಂಬ ನಾನ್ಕಣಿ ಮತ್ತು ಝಾ ಅವರ ಅಭಿಪ್ರಾಯಕ್ಕೆ ನಮ್ಮ ಸಹಮತವಿದೆ… ಗೃಹ ಸಚಿವರಾದ ದೇಶಮುಖ್‌ ಅವರು ಪೊಲೀಸ್‌ ಪಡೆಗಳನ್ನು ಮುನ್ನಡೆಸುವವರಾಗಿದ್ದಾರೆ… ಇದಕ್ಕಾಗಿ ಸ್ವತಂತ್ರ ತನಿಖೆಯ ಅಗತ್ಯವಿದೆ… ಆದರೆ, ಸಿಬಿಐ ತಕ್ಷಣಕ್ಕೆ ಎಫ್‌ಐಆರ್‌ ದಾಖಲಿಸುವುದಾಗಲಿ ಅಥವಾ ಪಾಟೀಲ್‌ ದೂರಿನ ವಿಚಾರಣೆಗೆ ಮುಂದಾಗುವ ಅಗತ್ಯವಿಲ್ಲ” ಎಂದು ಪೀಠ ಹೇಳಿದೆ.

ಮೊದಲಿಗೆ ದೇಶಮುಖ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ದೇಶಮುಖ್‌ ಮತ್ತು ಸಿಂಗ್‌ ವಿರುದ್ಧದ ಆರೋಪ-ಪ್ರತ್ಯಾರೋಪಗಳು ಗಂಭೀರ ಸ್ವರೂಪದವಾಗಿದ್ದು, ಮೊದಲಿಗೆ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ಮನವಿ ಹಿಂಪಡೆದಿದ್ದ ಸಿಂಗ್‌ ಅವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com