ಸುದ್ದಿಗಳು

ಒಂಬತ್ತು ನೂತನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಪ್ರಮಾಣ ವಚನ: ಮೂವತ್ಮೂರಕ್ಕೆ ಏರಿದ ನ್ಯಾಯಮೂರ್ತಿಗಳ ಸಂಖ್ಯೆ

ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವುದು ಇದೇ ಮೊದಲು.

Bar & Bench

ಇತ್ತೀಚೆಗಷ್ಟೇ ನೇಮಕಗೊಂಡ ನೂತನ ಒಂಬತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮಂಗಳವಾರ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯಾಬಲ 33ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಉನ್ನತ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 10 ರಿಂದ 1ಕ್ಕೆ ಇಳಿಕೆಯಾಗಿದೆ. ಸುಪ್ರೀಂಕೋರ್ಟ್‌ ಒಟ್ಟು 34 ನ್ಯಾಯಮೂರ್ತಿಗಳ ಸ್ಥಾನವನ್ನು ಹೊಂದಿದ್ದು, ಈ ಪೈಕಿ 33 ಸ್ಥಾನಗಳು ಭರ್ತಿಯಾದಂತಾಗಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜಿತೇಂದ್ರ ಕುಮಾರ್ ಮಹೇಶ್ವರಿ, ಹಿಮ ಕೊಹ್ಲಿ, ಬಿ ವಿ ನಾಗರತ್ನ, ಸಿ ಟಿ ರವಿಕುಮಾರ್, ಎಂ ಎಂ ಸುಂದ್ರೇಶ್, ಬೇಲಾ ತ್ರಿವೇದಿ ಮತ್ತು ಪಿ ಎಸ್ ನರಸಿಂಹ ಅವರಿಗೆ ಪ್ರಮಾಣವಚನ ಬೋಧಿಸಿದರು.

ಕಳೆದ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವುದು ಇದೇ ಮೊದಲು. ಒಂಬತ್ತು ನ್ಯಾಯಮೂರ್ತಿಗಳ ಹೆಸರನ್ನು ಪದೋನ್ನತಿಗಾಗಿ ಕೊಲಿಜಿಯಂ ಆಗಸ್ಟ್ 17 ರಂದು ಶಿಫಾರಸು ಮಾಡಿತ್ತು. ಆಗಸ್ಟ್ 26 ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿತ್ತು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮಾಹಿತಿಯನ್ನು ʼಬಾರ್‌ ಅಂಡ್‌ ಬೆಂಚ್‌ʼ ಟ್ವಿಟರ್‌ ಹ್ಯಾಂಡಲ್‌ ಕಟ್ಟಿಕೊಟ್ಟಿತು.