Nirav Modi 
ಸುದ್ದಿಗಳು

ಏಳನೇ ಬಾರಿಗೆ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಇಂಗ್ಲೆಂಡ್‌ ನ್ಯಾಯಾಲಯ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಪ್ರಕರಣದಲ್ಲಿ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರಿಗೆ ಇಂಗ್ಲೆಂಡ್‌ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ್ದು, ಅವರ ಅರ್ಜಿಯು ಏಳನೇ ಬಾರಿಗೆ ತಿರಸ್ಕೃತಗೊಂಡಂತಾಗಿದೆ.

Bar & Bench

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಅವರಿಗೆ ಜಾಮೀನು ನೀಡಲು ಲಂಡನ್‌ನಲ್ಲಿರುವ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.

13,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾದ ಆರೋಪಿಯಾಗಿರುವ ನೀರವ್‌ ಮೋದಿ ಅವರು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 2019ರ ಮಾರ್ಚ್‌ನಲ್ಲಿ ಬಂಧನಕ್ಕೊಳಗಾಗಿರುವ ನೀರವ್ ಮೋದಿ ಅವರು ವಾಂಡ್ಸ್‌ವರ್ಥ್‌ ಜೈಲಿನಲ್ಲಿದ್ದಾರೆ.

ನೀರವ್‌ ಮೋದಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ಮುಂದಿನ ಹಂತದ ವಿಚಾರಣೆಯಲ್ಲಿ ಅವರನ್ನು ನ್ಯಾಯಮೂರ್ತಿಗಳ ಎದುರು ಹಾಜರುಪಡಿಸಲಾಗುವುದು. ನವೆಂಬರ್‌ 3ಕ್ಕೆ ನಿಗದಿಯಾಗಿರುವ ವಿಚಾರಣೆಯವರೆಗೆ ನೀರವ್‌ ಮೋದಿ ಅವರ ಜೈಲು ವಾಸ ಮುಂದುವರಿಯಲಿದೆ ಎಂದು ಕಳೆದ ತಿಂಗಳು ನ್ಯಾಯಾಲಯ ಹೇಳಿತ್ತು.

ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯಿದೆ ಅಡಿ ಮುಂಬೈ, ರಾಜಸ್ಥಾನ, ಯುಎಇ ಮತ್ತು ಇಂಗ್ಲೆಂಡ್‌ನಲ್ಲಿರುವ ಸ್ಥಿರ ಮತ್ತು ಚರಾಸ್ತಿಯನ್ನು ತನ್ನ ತೆಕ್ಕೆಗೆ ಪಡೆಯಲು ಜೂನ್‌ನಲ್ಲಿ ಜಾರಿ ನಿರ್ದೇಶನಾಲಯಕ್ಕೆ ಅನುಮತಿಸಲಾಗಿತ್ತು. ಬ್ಯಾಂಕ್‌ ಅಧಿಕಾರಿಗಳ ಜೊತೆ ಶಾಮೀಲಾಗಿ ಪಿಎನ್‌ಬಿಗೆ 13,500 ಕೋಟಿ ರೂಪಾಯಿ ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ ಮತ್ತು ಅವರ ಸಂಬಂಧಿ ಮೆಹುಲ್‌ ಚೋಕ್ಸಿ ಅವರನ್ನು ತನಿಖೆಗೆ ಒಳಪಡಿಸಲಾಗಿದೆ.

ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯಗಳು ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿವೆ. ಅಂಟಿಗುವಾ ಮತ್ತು ಬಾರ್ಬುಡಾದಲ್ಲಿರುವ ಚೋಕ್ಸಿ ಅವರು ಆ ದೇಶದ ಪೌರತ್ವ ಪಡೆದುಕೊಂಡಿದ್ದಾರೆ. ಮತ್ತೊಂದು ಕಡೆ, ಸತತ ಐದನೇ ಬಾರಿಗೆ ಮೋದಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವರು ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಕೋರಿದ್ದರು.