NLSIU 
ಸುದ್ದಿಗಳು

ಎನ್ಎಲ್ಎಟಿ ಪ್ರವೇಶ ಪರೀಕ್ಷೆ: ವಿಶೇಷಚೇತನ ಅಭ್ಯರ್ಥಿಗಳಿಗೆ ಸೂಚನೆ ಬಿಡುಗಡೆ ಮಾಡಿದ ಎನ್ಎಲ್‌ಎಸ್‌ಐಯು

ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಎನ್ಎಲ್ಎಟಿ ಪರೀಕ್ಷೆ ಬರೆಯಲು ವಿಶೇಷಚೇತನ ಅಭ್ಯರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ವಿಶೇಷಚೇತನ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುವವರಿಗೂ ಸೂಚನೆಗಳನ್ನು ನೀಡಲಾಗಿದೆ.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾ‍ಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ವಿದ್ಯಾರ್ಥಿಗಳ ಪ್ರವೇಶಾತಿಗೆ ಇದೇ ಮೊದಲ ಬಾರಿಗೆ ತನ್ನದೇ ಆದ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್ಎಲ್ಎಟಿ) ನಡೆಸುತ್ತಿದ್ದು, ಅಂಗವೈಕಲ್ಯತೆಯ ಸಮಸ್ಯೆ ಎದುರಿಸುತ್ತಿರುವ ವಿಶೇಷಚೇತನರಿಗೆ ಪ್ರತ್ಯೇಕ ಸೂಚನೆಗಳನ್ನು ನೀಡಿದೆ.

ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಎನ್ಎಲ್ಎಟಿ ಪರೀಕ್ಷೆ ಬರೆಯಲು ಎಲ್ಲಾ ವಿಶೇಷಚೇತನರಿಗೆ 15 ನಿಮಿಷಗಳ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ.

“ಗುರುತರ ಅಂಗವೈಕಲ್ಯ ಇರುವ ಎಲ್ಲಾ ವಿಶೇಷಚೇತನ ಅಭ್ಯರ್ಥಿಗಳಿಗೆ ಪರೀಕ್ಷೆ ಪೂರ್ಣಗೊಳಿಸಲು 15 ನಿಮಿಷಗಳ ಹೆಚ್ಚುವರಿ ಕಾಲಾವಕಾಶ/ ಪರಿಹಾರ ಅವಧಿ ನೀಡಲಾಗಿದ್ದು (ಎನ್ಎಲ್ಎಟಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಇದು ಅನ್ವಯವಾಗಲಿದೆ) ಲಿಪಿಕಾರರ ಸಹಾಯ ಪಡೆಯುವ ವಿಕಲಾಂಗ ಅಭ್ಯರ್ಥಿಗಳು ಕೂಡ ಇದರ ವ್ಯಾಪ್ತಿಗೆ ಬರುತ್ತಾರೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಗುರುತರ ಅಂಗವವೈಕಲ್ಯ ಇರುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುವ ಲಿಪಿಕಾರರಿಗೆ ಕೂಡ ಸೂಚನೆಗಳನ್ನು ನೀಡಲಾಗಿದ್ದು ಅವು ಈ ಕೆಳಗಿನಂತಿವೆ:

  • ದೃಷ್ಟಿಹೀನತೆ, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಅಂಗಾಂಗ ದೋಷ (ಎರಡೂ ಕೈಗಳ ಊನತೆ ಇರುವವರು) ಇರುವ ಅಭ್ಯರ್ಥಿಗಳು ಲಿಪಿಕಾರರ ಸೇವೆ ಪಡೆಯಲು ಅರ್ಹರಾಗಿರುತ್ತಾರೆ.

  • ಇತರ ರೀತಿಯ ಗುರುತರ ಅಂಗವೈಕಲ್ಯದಿಂದ ಬಳಲುತ್ತಿರುವ ಅಭ್ಯರ್ಥಿಗಳು ಕೂಡ ಲಿಪಿಕಾರರ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ, ಪರೀಕ್ಷೆ ಬರೆಯಲು ದೈಹಿಕ ಮಿತಿ ಹೊಂದಿರುವ ಕುರಿತು ಸೂಕ್ತವಾದ ವೈದ್ಯಕೀಯ ಪ್ರಮಾಣಪತ್ರಗಳನ್ನು ಅಭ್ಯರ್ಥಿ ಸಲ್ಲಿಸಬೇಕು. ಎನ್ಎಲ್ಎಸ್ಐಯು ಅಧಿಸೂಚನೆಯೊಂದಿಗೆ ವಿಶೇಷಚೇತನ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ಅರ್ಜಿಯನ್ನು ಕೂಡ ನೀಡಲಾಗಿದೆ.

  • ವಿಶೇಷಚೇತನ ಅಭ್ಯರ್ಥಿಗಳು ತಮ್ಮದೇ ಆದ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು ಪ್ರಮಾಣಪತ್ರವನ್ನು ಕೂಡ ಸಲ್ಲಿಸಬೇಕು. ಇದಕ್ಕಾಗಿ ಎನ್‌ಎಲ್‌ಎಸ್‌ಐಯು ಅಧಿಸೂಚನೆಯಲ್ಲಿ ನಿಗದಿತ ನಮೂನೆ ನೀಡಲಾಗಿದೆ.

  • ಲಿಪಿಕಾರರು ಕನಿಷ್ಠ ಮೆಟ್ರಿಕ್ಯುಲೇಷನ್ (10 ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

  • ಅಭ್ಯರ್ಥಿಯ ಸ್ವಂತ ಅರ್ಹತೆಗಿಂತಲೂ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಲಿಪಿಕಾರ ಪಡೆದಿರತಕ್ಕದ್ದಲ್ಲ.

  • ಲಿಪಿಕಾರರ ಸಹಾಯ ಪಡೆಯಲು ಬಯಸುವ ಎಲ್ಲಾ ವಿಶೇಷಚೇತನ ಅಭ್ಯರ್ಥಿಗಳು ತಮ್ಮ ಅರ್ಜಿಯ ‘ಮೀಸಲಾತಿ ಟ್ಯಾಬ್’ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು ಮತ್ತು ಎನ್‌ಎಲ್‌ಎಸ್‌ಐಯು ಪ್ರವೇಶ ಪೋರ್ಟಲ್‌ admissions.nls.ac.inನಲ್ಲಿ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕು.