ಎನ್ಎಲ್‌ಯು‌ಸಿ ಕಾರ್ಯದರ್ಶಿ-ಖಜಾಂಚಿ ಹುದ್ದೆಯಿಂದ ವಿಸಿ ಕೃಷ್ಣಸ್ವಾಮಿ ಪದಚ್ಯುತಿ; ಬೈಲಾ ಉಲ್ಲಂಘಿಸಿಲ್ಲ-ಎನ್ಎಲ್ಎಸ್‌ಐಯು

ಎನ್ಎಲ್‌ಯು ಒಕ್ಕೂಟದ ಸೆಕ್ರೆಟೇರಿಯಟ್ ಅನ್ನು ಬೆಂಗಳೂರಿನ ಎಲ್ಎಲ್‌ಎಸ್‌ಐಯುನಿಂದ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿಗೆ ಸ್ಥಳಾಂತರಿಸಲು ನಿರ್ಧಾರ. ಬೈಲಾ ಉಲ್ಲಂಘಿಸಿಲ್ಲ, ಬೇರೆಯಾಗದೆ ಪರ್ಯಾಯವಿಲ್ಲ ಎಂದ ಕಾನೂನು ಶಾಲೆ.
NLU Consortium
NLU Consortium

ಪ್ರಸಕ್ತ ವರ್ಷದ ಪ್ರವೇಶಾತಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವುದಾಗಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು) ಘೋಷಿಸಿದ್ದರಿಂದ ಕೆರಳಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಎನ್ಎಲ್ಎಸ್‌ಐಯು ಉಪಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರನ್ನು ಒಕ್ಕೂಟದ ಕಾರ್ಯದರ್ಶಿ-ಖಜಾಂಚಿ ಹುದ್ದೆಯಿಂದ ಪದಚ್ಯುತಿಗೊಳಿಸಿದೆ.

ಎನ್ಎಲ್‌ಯುಸಿ ಪ್ರಕಟಣೆ ಹೊರಬಿದ್ದ ನಂತರ ಪ್ರತಿಕ್ರಿಯಿಸಿರುವ ಎನ್ಎಲ್ಎಸ್ಐಯು, ಒಕ್ಕೂಟವು ಸೆಪ್ಟೆಂಬರ್ 28ರಂದು ನಡೆಸಲು ಉದ್ದೇಶಿಸಿರುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) 2020ಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಳ್ಳುವುದಾಗಿ ಹೇಳುವ ಮೂಲಕ ಸೆಡ್ಡು ಹೊಡೆದಿದೆ.

ಎನ್ಎಲ್ ಯು ಒಕ್ಕೂಟದ ಸೆಕ್ರೆಟೇರಿಯಟ್ ಅನ್ನು ಬೆಂಗಳೂರಿನ ಎಲ್ಎಲ್‌ಎಸ್‌ಐಯುನಿಂದ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿಗೆ (ಎನ್‌ಎಎಲ್‌ಎಸ್‌ಎಆರ್) ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಎನ್‌ಎಎಲ್‌ಎಸ್‌ಎಆರ್ ಉಪಕುಲಪತಿ ಫೈಜಾನ್ ಮುಸ್ತಾಫಾ ಅವರು ಒಕ್ಕೂಟದ ಆಡಳಿತಾತ್ಮಕ ಮತ್ತು ಕಾರ್ಯದರ್ಶಿ ಕರ್ತವ್ಯಗಳನ್ನು ಮಧ್ಯಂತರ ಅವಧಿಗೆ ನಿಭಾಯಿಸಲಿದ್ದಾರೆ. ಎನ್‌ಎಲ್‌ಯು ಒಡಿಶಾ ಉಪಕುಲಪತಿ ಪ್ರೊ. ಎಸ್ ಕೆ ಡಿ ರಾವ್ ಅವರು ಸಿಎಲ್ಎಟಿ ಒಕ್ಕೂಟದ ಹಣಕಾಸು ಕರ್ತವ್ಯಗಳನ್ನೊಳಗೊಂಡ ಖಜಾಂಚಿ ಹುದ್ದೆಯನ್ನು ನಿಭಾಯಿಸಲಿದ್ದಾರೆ.

ಪ್ರೊ. ಮುಸ್ತಾಫಾ ಅವರು ಎನ್ಎಲ್‌ ಯು ಒಕ್ಕೂಟದ ವೆಬ್ ಸೈಟ್ ಅನ್ನು ತಕ್ಷಣ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿದ್ದಾರೆ. “ಸಿಎಲ್ಎಟಿ 2020ಯಲ್ಲಿ ಪಾಲ್ಗೊಳ್ಳುವ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಲ್ಲದೇ ಒಕ್ಕೂಟವು ಸರಾಗವಾಗಿ ಕಾರ್ಯನಿರ್ವಹಿಸಲು” ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ “ಬಾರ್ ಅಂಡ್ ಬೆಂಚ್”ಗೆ ನೀಡಿದ್ದ ಸಂದರ್ಶನದಲ್ಲಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರು ಒಕ್ಕೂಟದ ವಿಶ್ವದ್ಯಾಲಯಗಳು ಸಿಎಲ್ಎಟಿ 2020 ನಡೆಸಲು ತಡವಾಗುತ್ತಿರುವುದರಿಂದ ಬೇಸತ್ತಿವೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಅವರ “ವೈಯಕ್ತಿಕ ಅಭಿಪ್ರಾಯ” ಎಂದು ಒಕ್ಕೂಟ ಹೇಳಿದೆ. ಒಕ್ಕೂಟದ ಹೇಳಿಕೆ ಇಂತಿದೆ;

“ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿರುವಂತೆ ಬೆಂಗಳೂರಿನ ಎಲ್ಎಸ್ಐಯು ಹೊರತುಪಡಿಸಿ ಬೇರಾವುದೇ ಕಾನೂನು ವಿಶ್ವವಿದ್ಯಾಲಯವು ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸುತ್ತಿಲ್ಲ. ಬಾರ್ ಅಂಡ್ ಬೆಂಚ್‌ಗೆ ಎನ್ಎಲ್ಎಸ್ಐಯು ಕುಲಪತಿ ಸುಧೀರ್ ಕೃಷ್ಣಸ್ವಾಮಿ ನೀಡಿರುವ ಸಂದರ್ಶನವು ತೀರ ವೈಯಕ್ತಿಕ ಅಭಿಪ್ರಾಯಗಳಿಂದ ಕೂಡಿದೆ. ಒಕ್ಕೂಟದ ಸದಸ್ಯರಾಗಿರುವ ಯಾವುದೇ ವಿಶ್ವವಿದ್ಯಾಲಯವು ಬೇಸತ್ತಿಲ್ಲ ಮತ್ತು ಯಾವುದೇ ರೀತಿಯಲ್ಲೂ ಪ್ರಸಕ್ತ ಸಾಲಿನಲ್ಲಿ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿಸಿಲ್ಲ.”

ಎನ್ಎಲ್‌ಎಸ್‌ಐಯು ಉಪಕುಲಪತಿ ತೆಗೆದುಕೊಂಡಿರುವ ನಿರ್ಧಾರಗಳು ತನ್ನ ಬೈ-ಲಾ ಮತ್ತು ಉದ್ದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಒಕ್ಕೂಟದ ಕಾರ್ಯದರ್ಶಿ-ಖಜಾಂತಿ ಹುದ್ದೆಯಿಂದ ಪದಚ್ಯುತಗೊಳಿಸಲು ನಿರ್ಧರಿಸಿದೆ ಎಂದು ಹೇಳಿದೆ.

“ಎನ್ಎಲ್ಎಸ್ಐಯು ಉಪಕುಲಪತಿಯು ಒಕ್ಕೂಟದ ಕಾರ್ಯದರ್ಶಿ-ಖಜಾಂಚಿಯಾಗಿದ್ದುಕೊಂಡು ಎನ್ಎಲ್ಎಸ್ಐಯು ಪ್ರವೇಶಾತಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗಿ ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಒಕ್ಕೂಟದ ಕಾರ್ಯದರ್ಶಿ-ಖಜಾಂಚಿಯನ್ನು ಪದಚ್ಯುತಿಗೊಳಿಸುವ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಆಡಳಿತ ಮಂಡಳಿಯು ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ನಿರ್ಧಾರಕೈಗೊಳ್ಳುವವರೆಗೆ ಯಾವುದೇ ಕರ್ತವ್ಯ ನಿರ್ವಹಿಸದೇ ಮತ್ತು ಒಕ್ಕೂಟದ ಪರವಾಗಿ ಮಾತನಾಡದಂತೆ ಹಾಗೂ ಯಾವುದೇ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ.”

“ಇಂಥ ಅನಿಶ್ಚಿತ ಸಂದರ್ಭಗಳನ್ನು ನಿಭಾಯಿಸಲು ಬೈ ಲಾ ಮತ್ತು ಒಪ್ಪಂದದಲ್ಲಿ ಅಗತ್ಯ ತಿದ್ದುಪಡಿ” ತರುವ ಉದ್ದೇಶದಿಂದ ಎನ್ಎಲ್‌ಯು ಒಕ್ಕೂಟವು ಕಾರ್ಯಕಾರಿ ಮಂಡಳಿ ಮತ್ತು ಆಡಳಿತ ಮಂಡಳಿಯ ವಿಶೇಷ ಸಭೆಗಳನ್ನು ಸೆಪ್ಟೆಂಬರ್ 8ರಂದು ನಡೆಸಲು ಉದ್ದೇಶಿಸಿದೆ.

ಸೆಪ್ಟೆಂಬರ್ 28ರಂದು ನಡೆಸಲು ಉದ್ದೇಶಿಸಿರುವ ಸಿಎಲ್ಎಟಿ 2020 ಕಡ್ಡಾಯವಾಗಿ ನಡೆಯಲಿದೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಪ್ರಸಕ್ತ ವರ್ಷದ ಪ್ರವೇಶಾತಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಎನ್ಎಲ್ಎಸ್ಐಯು ನಿರ್ಧಾರವು ಕಾನೂನು ಸಮುದಾಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸಿಎಲ್ಎಟಿ ಯನ್ನು ಹಲವು ಬಾರಿ ಮುಂದೂಡಿದ್ದರಿಂದ ಎನ್ಎಲ್ಎಸ್ಐಯು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿತ್ತು. ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರವು ಒಕ್ಕೂಟದ ಬೈ-ಲಾದ ಉಲ್ಲಂಘನೆಯಾಗಲಿರುವುದರಿಂದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಎನ್ಎಸ್ಎಲ್ಐಯುಗೆ ಎನ್ಎಲ್‌ಯು ಒಕ್ಕೂಟ ಸೂಚಿಸಿತ್ತು.

ಬೈ-ಲಾ ಉಲ್ಲಂಘಿಸಿಲ್ಲ, ಸಿಎಲ್ಎಟಿ ಮುಂದೂಡಿಕೆಗೆ ಕಳವಳ: ಎನ್ಎಲ್ಎಸ್ಐಯು

ಎನ್ಎಲ್‌ಯು ಒಕ್ಕೂಟದ ಕಾರ್ಯದರ್ಶಿ-ಖಜಾಂಚಿ ಹುದ್ದೆಯಿಂದ ಎನ್ಎಲ್ಎಸ್ಐಯು ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ಹೇಳಿಕೆ ಹೊರಬೀಳುತ್ತಿದ್ದಂತೆ ಸಿಎಲ್ಎಟಿ 2020 ಪರೀಕ್ಷೆಯಿಂದ ದೂರ ಉಳಿಯುವುದಾಗಿ ಹೇಳಿದೆ.

NLSIU
NLSIU

ಈ ಕುರಿತ ಮಾಧ್ಯಮ ಹೇಳಿಕೆಗೆ ಎನ್ಎಲ್ಎಸ್ಐಯು ರಿಜಿಸ್ಟ್ರಾರ್ ಪ್ರೊ. ಸರಸು ಎಸ್ತರ್ ಥಾಮಸ್ ಸಹಿ ಮಾಡಿದ್ದು, ಹೀಗೆ ಹೇಳಲಾಗಿದೆ,

“... ಒಕ್ಕೂಟವು ಸೆಪ್ಟೆಂಬರ್ 6ರಂದು ಮಾಧ್ಯಮ ಹೇಳಿಕೆ ನೀಡಿರುವುದರಿಂದ ಎನ್ಎಲ್ಎಸ್ಐಯು ಮತ್ತು ಅದರ ಉಪಕುಲಪತಿಗೆ ಸಿಎಲ್ಎಟಿ 2020ಯಿಂದ ಬೇರ್ಪಡುವುದಲ್ಲದೇ ಯಾವುದೇ ಪರ್ಯಾಯವಿಲ್ಲ.”
ಎನ್ಎಲ್ಎಸ್ಐಯು

“ಒಕ್ಕೂಟದ ಬೈ-ಲಾವನ್ನು ವಿಶ್ವವಿದ್ಯಾಲಯ ಅಥವಾ ಉಪಕುಲಪತಿ ಉಲ್ಲಂಘಿಸಿಲ್ಲ. ಒಕ್ಕೂಟದ ಸ್ಥಾಪಕ ಸದಸ್ಯತ್ವ ಹೊಂದಿರುವ ಎನ್ಎಲ್ಎಸ್ಐಯು ಒಕ್ಕೂಟದ ಉದ್ದೇಶಗಳಿಗೆ ಚ್ಯುತಿಯಾಗುವ ರೀತಿಯಲ್ಲಿ ಯಾವುದೇ ಸಂದರ್ಭದಲ್ಲೂ ನಡೆದುಕೊಂಡಿಲ್ಲ. ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡುವ ರೀತಿಯಲ್ಲಿಯೂ ವಿಶ್ವವಿದ್ಯಾಲಯದ ಕುಲಪತಿ ನಡೆದುಕೊಂಡಿಲ್ಲ. ಆದ್ದರಿಂದ ಸೆಪ್ಟೆಂಬರ್ 6ರ ಮಾಧ್ಯಮ ಹೇಳಿಕೆಯಲ್ಲಿ ಒಕ್ಕೂಟ ತೆಗೆದುಕೊಂಡಿದೆ ಎನ್ನಲಾಗಿರುವ ನಿರ್ಧಾರಗಳಿಗೆ ಯಾವುದೇ ರೀತಿಯಾದ ಕಾನೂನಿನ ಮಾನ್ಯತೆ ಅಥವಾ ಅಧಿಕಾರ ಇಲ್ಲ.”

“ಸಿಎಲ್ಎಟಿ 2020ಯನ್ನು ಪದೇಪದೇ ಮುಂದೂಡುವ ಕುರಿತು ಪ್ರಾಧ್ಯಾಪಕರು ಮತ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಮತ್ತೆ ಸಿಎಲ್ಎಟಿ 2020 ನಡೆಸುವುದು ತಡವಾದರೆ ಪ್ರವೇಶಾತಿಗೆ ಪ್ರತ್ಯೇಕ ಪ್ರಕ್ರಿಯೆ ಆರಂಭಿಸುವ ಕುರಿತಾದ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ವಿಶ್ವವಿದ್ಯಾಲಯ ಮತ್ತು ಉಪಕುಲಪತಿಗೆ ಸರ್ವಾನುಮತದಿಂದ ನೀಡಲಾಗಿದೆ” ಎಂದು ಎನ್ಎಲ್ಎಸ್ಐಯು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಸಮಸ್ಯೆ ಪರಿಹಾರಕ್ಕಾಗಿ ಹಲವು ಪರ್ಯಾಯಗಳನ್ನೊಳಗೊಂಡ ಸಲಹೆಗಳನ್ನೂ ನೀಡಲಾಗಿತ್ತು. ಅವು ಇಂತಿವೆ:

1. ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಪರೀಕ್ಷೆ ಸಾಧ್ಯವಿಲ್ಲವಾದ್ದರಿಂದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ವಿನಾಯಿತಿ ನೀಡಬಹುದು.

2. ಎರಡು ಅಥವಾ ಮೂರು ಸರಣಿಯಲ್ಲಿ ಸಿಎಲ್ಎಟಿ ನಡೆಸುವುದು.

3. ಯಾವುದೇ ತೆರನಾದ ನೋಂದಣಿ ಅಥವಾ ಶುಲ್ಕ ಪಾವತಿಸದೇ ಪರೀಕ್ಷೆ ಎದುರಿಸಲು ಸಿಎಲ್ಎಟಿ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುವುದರ ಜೊತೆಗೆ ಪ್ರತಿ ಎನ್ಎಲ್ ಯುಗಳಿಗೆ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವುದು.

Also Read
ಎನ್‌ಎಲ್‌ಎಟಿ 2020 ಪರೀಕ್ಷೆ ಬರೆಯಲು ಬೇಕಾದ ತಾಂತ್ರಿಕ ಅಗತ್ಯತೆಗಳನ್ನು ಬಿಡುಗಡೆ ಮಾಡಿದ ಎನ್‌ಎಲ್‌ಎಸ್‌ಐಯು

ಮೇಲಿನ ಸಲಹೆಗಳನ್ನು ಎನ್ಎಲ್ ಯು ಒಕ್ಕೂಟದ ಕಾರ್ಯಕಾರಿ ಸಮಿತಿಯು ಪದೇಪದೇ ತಿರಸ್ಕರಿಸಿತು ಎಂದಿರುವ ಎನ್ಎಲ್ಎಸ್ಐಯು ಈ ರೀತಿ ಹೇಳಿದೆ,

“ಒಕ್ಕೂಟವು ಒಂದು ಕಡೆ ಸಿಎಲ್ಎಟಿ 2020 ಪರೀಕ್ಷೆ ನಡೆಸಲು ನಿರ್ಧಾರಕೈಗೊಳ್ಳಲಿಲ್ಲ. ಮತ್ತೊಂದು ಕಡೆ ಎನ್ಎಲ್ಎಸ್ಐಯು ಪ್ರಸ್ತಾಪಿಸಿದ ಸಲಹೆಗಳನ್ನೂ ಪರಿಗಣಿಸಲಿಲ್ಲ ಅಥವಾ ಕೋವಿಡ್ ವ್ಯಾಪಿಸಿರುವ ಇಂಥ ವಿಶಿಷ್ಟ ಸಂದರ್ಭದಲ್ಲಿಯೂ ಪ್ರತ್ಯೇಕ ವಿಧಾನ ಅನುಸರಿಸಲು ಎನ್ಎಲ್ ಯುಗಳಿಗೆ ಅವಕಾಶ ಕಲ್ಪಿಸಲಿಲ್ಲ.”

“ಒಕ್ಕೂಟದಿಂದ ಎನ್ಎಲ್ಎಸ್‌ಐಯುವನ್ನು ತೆಗೆದುಹಾಕುವ ಸಂಬಂಧದ ಸಾಮಾನ್ಯ ಸಭೆಯು ನಿಲುವಳಿ ಕೈಗೊಳ್ಳಲು ಒಕ್ಕೂಟದ ಒಪ್ಪಂದದಲ್ಲಿ ಅಥವಾ ಬೈಲಾದಲ್ಲಿ ಕಾನೂನಿನ ಅಧಿಕಾರವಿಲ್ಲ ಎಂದು ಒಕ್ಕೂಟಕ್ಕೆ ವಿಶ್ವವಿದ್ಯಾಲಯವು ಲಿಖಿತ ಪ್ರತಿಕ್ರಿಯೆ ಮೂಲಕ ತಿಳಿಸಿದೆ. ಅದಾಗ್ಯೂ, ಸರಾಗವಾಗಿ ಸಿಎಲ್ಎಟಿ 2020 ನಡೆಸುವುದನ್ನು ಸಂಪೂರ್ಣವಾಗಿ ಬೆಂಬಲಿಸಲಾಗುವುದು" ಎಂದು ಎನ್ಎಲ್ಎಸ್ಐಯು ಹೇಳಿದೆ.

“ಸಿಎಲ್ಎಟಿ 2020 ನಡೆಸುವ ಪ್ರಕ್ರಿಯೆಯಲ್ಲಿ ಆಡಳಿತಾತ್ಮಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಲಿ, ಸಿಬ್ಬಂದಿ ಅಥವಾ ಯಾವುದೇ ಸದಸ್ಯರೂ ಭಾಗವಹಿಸುವುದಿಲ್ಲ” ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಎನ್ಎಲ್‌ಯು ಒಕ್ಕೂಟದ ಮಾಧ್ಯಮ ಹೇಳಿಕೆ ಓದಲು ಇಲ್ಲಿ ಕ್ಲಿಕ್ಕಿಸಿ

Attachment
DOC
Press_Release_Sep_6_2020.docx
Download

Related Stories

No stories found.
Kannada Bar & Bench
kannada.barandbench.com