ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ವಪ್ರೇರಣೆಯಿಂದ ಶೇ 25ರಷ್ಟು ಸಮವರ್ಗೀಯ ಮೀಸಲಾತಿ ನೀಡುವ ಕ್ರಮ ಅಳವಡಿಸಿಕೊಂಡಿರುವುದಾಗಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಮೀಸಲಾತಿ ಜಾರಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಈ ಪ್ರತಿಕ್ರಿಯೆ ನೀಡಿದೆ.
ತನ್ನ ಒಳಗೊಳ್ಳವಿಕೆ ಮತ್ತು ವಿಸ್ತರಣಾ ಯೋಜನೆ 2021-2025ನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ಒದಗಿಸುವ ಕಾರ್ಯ ನಡೆದಿದೆ ಎಂದು ವಿಶ್ವವಿದ್ಯಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಬಿ ಎ ಎಲ್‌ಎಲ್‌ಬಿ ಕೋರ್ಸ್‌ನಲ್ಲಿ 2021-22ರ ಶೈಕ್ಷಣಿಕ ಸಾಲಿಗೆ 120 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಮತ್ತು ಎಲ್‌ಎಲ್‌ಎಂ ಕೋರ್ಸ್‌ನಲ್ಲಿ 50 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳನ್ನು ಕರ್ನಾಟಕ ಸ್ಥಳೀಯ ಕೋಟಾದಡಿ ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಅದು ವಿವರಿಸಿದೆ.
ಅದೇ ಕೋಟಾದಡಿ 2022-23ರ ಸಾಲಿನ ಬಿಎ ಎಲ್‌ಎಲ್‌ಬಿ ಕೋರ್ಸ್‌ನಲ್ಲಿ 180 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು, ಎಲ್‌ಎಲ್‌ಎಂ ಕೋರ್ಸ್‌ನಲ್ಲಿ 75 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಹಾಗೂ ನೂತನ ಎಲ್‌ಎಲ್‌ಬಿ ಕೋರ್ಸ್‌ನಲ್ಲಿ 52 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಐದು ವರ್ಷಗಳ ಸಮಗ್ರ ಕೋರ್ಸ್‌ಗೆ 240 ಸೀಟುಗಳಲ್ಲಿ 60, ಎಲ್‌ಎಲ್‌ಎಂ ಕೋರ್ಸ್‌ಗೆ 100 ಸೀಟುಗಳಲ್ಲಿ 25 ಹಾಗೂ ಮೂರು ವರ್ಷಗಳ ಕೋರ್ಸ್‌ಗೆ 120 ಸೀಟುಗಳಲ್ಲಿ 30ರಷ್ಟು ಸೀಟುಗಳನ್ನು ರಾಜ್ಯ ಸ್ಥಳೀಯ ಕೋಟಾದಡಿ ಮೀಸಲಿಡಲಾಗುವುದು ಎಂದು ಎನ್‌ಎಲ್‌ಎಸ್‌ಐಯು ಸ್ಪಷ್ಟಪಡಿಸಿದೆ.
ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಮಸೂದೆಯನ್ನು ಫೆಬ್ರವರಿ 2020ರಲ್ಲಿ, ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ಒದಗಿಸಿತು. ಮಸೂದೆ ಮಂಡಿಸಿದ ಒಂದು ತಿಂಗಳಲ್ಲಿ ಅದನ್ನು ಅಂಗೀಕರಿಸಲಾಯಿತು. ತಿದ್ದುಪಡಿ ಕಾಯಿದೆಯಲ್ಲಿ ಕರ್ನಾಟಕ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸಮತಲ ಮೀಸಲಾತಿ ಜಾರಿಗೆ ತರುವ ಸೆಕ್ಷನ್ 4(3)ನ್ನು ಸೇರಿಸಲಾಯಿತು.
ಆದರೆ ತಿದ್ದುಪಡಿ ಕಾಯಿದೆಯನ್ನು ಅಸಿಂಧು ಎಂದು ಘೋಷಿಸಿದ ಕರ್ನಾಟಕ ಹೈಕೋರ್ಟ್ ಅದನ್ನು ರದ್ದುಪಡಿಸಿತು. ಮೀಸಲಾತಿ ಜಾರಿಗೊಳಿಸಲು ಮುಕ್ತವಾಗಿರುವ ಸ್ವಾಯತ್ತ ಸಂಸ್ಥೆಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂದು ಅದು ಕೇಳಿತು. ಇದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು.
ರಾಜ್ಯದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಾವುದೇ ಮಧ್ಯಂತರ ಆದೇಶ ನೀಡದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಜಾರಿಯಲ್ಲಿದೆ ಎಂದು ವಿವಿ ಹೇಳಿದೆ. ಸರ್ವೋಚ್ಚ ನ್ಯಾಯಾಲಯ ಪ್ರಕರಣದ ತೀರ್ಪು ನೀಡಬೇಕಿರುವ ಹಿನ್ನೆಲೆಯಲ್ಲಿ ವಿವಿ ತನ್ನ ಆಡಳಿತ ಮಂಡಳಿ ಜೊತೆ ಸಮಾಲೋಚಿಸಿ ಒಳಗೊಳ್ಳವಿಕೆ ಮತ್ತು ವಿಸ್ತರಣಾ ಯೋಜನೆ 2021-2025ನ್ನು ಜಾರಿಗೆ ತಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸಮತಲ ಮೀಸಲಾತಿಯನ್ನು ಹಂತಹಂತವಾಗಿ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದೆ.
ವಿವಿಯ 2024-25ನೇ ಶೈಕ್ಷಣಿಕ ಸಾಲಿನಲ್ಲಿ 135 ಕರ್ನಾಟಕದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ನಿರೀಕ್ಷೆಯಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಅದರ ಮುಂದಿನ ಶೈಕ್ಷಣಿಕ ವರ್ಷ ಅಂದರೆ 2025-26ರಲ್ಲಿ ಸುಮಾರು 500 ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆ ಇದೆ.