ಕಾನೂನು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಮುಂದಿನ ಶೈಕ್ಷಣಿಕ ಸಾಲಿನಿಂದ ಮೂರು ವರ್ಷಗಳ ಎಲ್ಎಲ್ಬಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆ.
ಅಕ್ಟೋಬರ್ 31 ರಂದು ನಡೆದ ವಿಶ್ವವಿದ್ಯಾಲಯದ 29 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎನ್‌ಎಲ್‌ಎಸ್‌ಐಯು ಉಪಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರು ಕೋರ್ಸ್ ಆರಂಭಿಸುವ ವಿಷಯ ಹಂಚಿಕೊಂಡರು.
ಆರಂಭಿಕ ಯಶಸ್ಸಿನ ಮೂರು ದಶಕಗಳ ನಂತರ ನೂತನ ಅಂತರ್‌ಶಿಸ್ತೀಯ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್ ಆರಂಭಿಸಲಾಗುತ್ತಿದೆ. ಕೋರ್ಸ್ ಪ್ರಾರಂಭಿಸಲು ವಿಶ್ವವಿದ್ಯಾಲಯವು ನಿಯಂತ್ರಕ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗಳಿಂದ ಅಗತ್ಯ ಅನುಮೋದನೆ ಪಡೆದುಕೊಂಡಿದೆ ಎಂಬುದಾಗಿ ಅವರು ತಿಳಿಸಿದರು.
ಜುಲೈ 2022 ರಿಂದ ಪ್ರಾರಂಭವಾಗುವ ಮುಂದಿನ ಶೈಕ್ಷಣಿಕ ಸಾಲಿನಿಂದ ಕೋರ್ಸ್ ಆರಂಭವಾಗಲಿದೆ. ವಿಶ್ವವಿದ್ಯಾಲಯವು ಆರ್ಥಿಕ ಸುಸ್ಥಿರತೆಯ ಕಡೆಗೆ ಸಾಧಿಸಿದ ಪ್ರಗತಿ ಕುರಿತಂತೆಯೂ ಪ್ರೊ.ಕೃಷ್ಣಸ್ವಾಮಿ ವಿವರಿಸಿದರು.
ಒಳಗೊಳ್ಳುವಿಕೆ ಮತ್ತು ವಿಸ್ತರಣಾ ಯೋಜನೆ 2021-25 ಕುರಿತಂತೆಯೂ ಅವರು ಮಾತನಾಡಿದರು. ಯೋಜನೆಯ ಪ್ರಕಾರ, 2028- 29ರವೇಳೆಗೆ ತನ್ನ ಎಲ್ಲಾ ಕೋರ್ಸ್‌ಗಳಲ್ಲಿ 2,200 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಎನ್‌ಎಲ್‌ಎಸ್‌ಐಯು ಮುಂದಾಗಿದೆ. ಒಟ್ಟಾರೆ ಕೋರ್ಸ್‌ಗಳಲ್ಲಿ ಹದಿನೈದು ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರ (1:15) ಅನುಪಾತ ಸಾಧಿಸುವುದು ವಿಶ್ವವಿದ್ಯಾಲಯದ ಗುರಿ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.