[From L to R] Justice Surya Kant, Justice DY Chandrachud and Justice Vikram Nath

 
A1
ಸುದ್ದಿಗಳು

ಕೇಂದ್ರದ 'ಒಂದು ಶ್ರೇಣಿ ಒಂದು ಪಿಂಚಣಿ' ಯೋಜನೆಯಲ್ಲಿ ಸಾಂವಿಧಾನಿಕ ಲೋಪವಿಲ್ಲ: ಸುಪ್ರೀಂ ಕೋರ್ಟ್

ಅದೇ ಶ್ರೇಣಿ ಹೊಂದಿರುವ ವ್ಯಕ್ತಿ ಅದೇ ಪಿಂಚಣಿ ಪಡೆಯಬೇಕು ಎಂದು ಯಾವುದೇ ಕಾನೂನು ಆದೇಶವಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

Bar & Bench

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಒಂದು ಶ್ರೇಣಿ ಒಂದು ಪಿಂಚಣಿ' (ಒಆರ್‌ಒಪಿ) ಯೋಜನೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಇಂಡಿಯನ್‌ ಎಕ್ಸ್‌ ಸರ್ವೀಸ್‌ಮನ್‌ ಮೂವ್‌ಮೆಂಟ್‌ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಯೋಧರ ಕಲ್ಯಾಣ ಇಲಾಖೆ ನಡುವಣ ಪ್ರಕರಣ].

ಒಂದೇ ಶ್ರೇಣಿಯಲ್ಲಿರುವ ಎಲ್ಲ ವ್ಯಕ್ತಿಗಳೂ ಒಂದೇ ಬಗೆಯ ಪಿಂಚಣಿ ಪಡೆಯಬೇಕು ಎಂದು ಯಾವುದೇ ಕಾನೂನಾತ್ಮಕ ಬೆಂಬಲವಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಅವರಿದ್ದ ತ್ರಿಸದಸ್ಯ ಪೀಠ ಹೇಳಿತು.

ಒಆರ್‌ಒಪಿ ಯೋಜನೆ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನೀತಿಯ ನಿರ್ಧಾರವಾಗಿದೆ. ಆ ನಿರ್ಧಾರವು ಸರ್ಕಾರದ ನೀತಿನಿರೂಪಣಾ ಅಧಿಕಾರದ ವ್ಯಾಪ್ತಿಯೊಳಗೆ ಇದೆ. ಇದರಲ್ಲಿ ಯಾವುದೇ ಬಗೆಯ ಸಾಂವಿಧಾನಿಕ ಲೋಪ ನಮಗೆ ಕಂಡಿಲ್ಲ ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರು ವಾದಿಸಿದಂತೆ ಒಆರ್‌ಒಪಿ ಕುರಿತ ವ್ಯಾಖ್ಯಾನ ಮನಬಂದಂತೆ ಇದೆ ಎನ್ನುವುದು ಕಂಡು ಬಂದಿಲ್ಲ. "ಜುಲೈ 1, 2019ರಿಂದ ಮರುನಿಗದಿ ಪ್ರಕ್ರಿಯೆ ಕೈಗೊಳ್ಳಬೇಕು ಮತ್ತು 3 ತಿಂಗಳೊಳಗೆ ಸೇನಾ ಸಿಬ್ಬಂದಿಗೆ ಬಾಕಿ ಪಾವತಿಸಬೇಕು," ಎಂದು ಪೀಠ ಆದೇಶಿಸಿದೆ.

2014ರಲ್ಲಿ ಅಂದಿನ ಹಣಕಾಸು ಸಚಿವ ಪಿ ಚಿದಂಬರಂ ಅವರು ರೂಪಿಸಿದ್ದಂತೆಯೇ ಈ ಯೋಜನೆ ಜಾರಿಗೊಳಿಸಲು ಕೋರಿ ಇಂಡಿಯನ್‌ ಎಕ್ಸ್‌ ಸರ್ವೀಸ್‌ಮನ್‌ ಮೂವ್‌ಮೆಂಟ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಸಂಸತ್‌ನಲ್ಲಿ ಸಚಿವರು ನೀಡಿದ್ದ ಭರವಸೆಯ ಹೊರತಾಗಿಯೂ “ವ್ಯಕ್ತಿ ನಿವೃತ್ತಿ ಹೊಂದಿದ ನಂತರ ಒಂದೇ ಶ್ರೇಣಿ ಅನುಭವಿಸಿದ್ದರೂ ಅವರ ಸೇವಾವಧಿ ದೀರ್ಘತೆಯನ್ನು ಪರಿಗಣಿಸಿ ವಿಭಿನ್ನ ಪ್ರಮಾಣದ ಪಿಂಚಣಿ ಜಾರಿಗೊಳಿಸಲಾಗಿದೆ” ಎಂದು ಮನವಿಯಲ್ಲಿ ಹೇಳಲಾಗಿತ್ತು.

ಈ ಕುರಿತಂತೆ ವಾದ ಮಂಡಿಸಿದ್ದ ಕೇಂದ್ರ “ಒಂದು ಶ್ರೇಣಿ ಒಂದು ಪಿಂಚಣಿಯ ಮೂಲ ಮೌಲ್ಯಗಳಲ್ಲಿ ಒಂದೇ ಬಗೆಯ ಶ್ರೇಣಿ ಮಾತ್ರವೇ ಅಲ್ಲ, ಒಂದೇ ಪ್ರಮಾಣದ ಸೇವಾವಧಿಯೂ ಸಹ ಸೇರಿದೆ ಎನ್ನುವುದನ್ನು ಅರ್ಜಿದಾರರ ವಾದವು ಪರಿಗಣಿಸಲು ಸೋಲುತ್ತದೆ. ಈ ಜೋಡಿ ಅಂಶಗಳನ್ನು ಬೇರ್ಪಡಿಸಲಾಗದು. ಕೇವಲ ಒಂದು ಶ್ರೇಣಿಯನ್ನು ಮಾತ್ರವೇ ಪರಿಗಣಿಸಿ ಸೇವಾವಧಿಯ ದೀರ್ಘತೆಯನ್ನು ನಿರ್ಲಕ್ಷಿಸಲಾಗದು. ಅದೇ ರೀತಿ ಕೇವಲ ಸೇವಾವಧಿಯ ದೀರ್ಘತೆಯನ್ನು ಪರಿಗಣಿಸಿ ಶ್ರೇಣಿಯನ್ನು ನಿರ್ಲಕ್ಷಿಸಲಾಗದು. ಒಆರ್‌ಒಪಿ ಮೂಲ ಅಂಶ ಒಂದು ಶ್ರೇಣಿ ಮತ್ತು ಒಂದೇ ಪ್ರಮಾಣದ ಸೇವಾವಧಿ ಆಗಿದೆ. ಇಲ್ಲಿ ಒಂದು ಎಂಬ ಪದ ʼಒಂದು ಶ್ರೇಣಿ ಮತ್ತು ಒಂದು ಸೇವಾವಧಿ ಎನ್ನುವಲ್ಲಿ ಎರಡು ಬಾರಿ ಬರುತ್ತದೆ ಎನ್ನುವುದನ್ನು ಪ್ರಧಾನವಾಗಿ ಗಮನಿಸಬೇಕಿದೆ" ಎಂದು ಹೇಳಿತ್ತು.