“ಸಕ್ಷಮ ಪ್ರಾಧಿಕಾರವು ಸರ್ಕಾರಿ ಸೇವಕನ ವಿರುದ್ಧದ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ನಿರಾಕರಿಸಿದ ಹೊರತಾಗಿಯೂ ಸಂಬಂಧಿತ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿರುವುದು ನ್ಯಾಯದಾನಕ್ಕೆ ವಿರುದ್ಧ. ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದ ಹೊರತು ಯಾವುದೇ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಲಾಗದು” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಹೇಳಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಗದೀಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಈ ಮೂಲಕ ಜಗದೀಶ್ ಅವರ ವಿರುದ್ಧ ಸವದತ್ತಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಸಂಜ್ಞೇಯ ಪರಿಗಣಿಸಿರುವುದನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ವಜಾ ಮಾಡಿದೆ.
“ಸರ್ಕಾರಿ ಸೇವಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ (ಅಭಿಯೋಜನೆ- ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ನಡೆಸುವ ವಿಚಾರಣಾ ಪ್ರಕ್ರಿಯೆ) ಮುಂದುವರಿಸಬೇಕಾದರೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಅರ್ಜಿದಾರ ಗ್ರಾಮ ಲೆಕ್ಕಿಗನ ಸಂಬಂಧಿತ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಬಳಿಕ ತನಿಖಾಧಿಕಾರಿಯು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಯು ಅನುಮತಿ ನಿರಾಕರಿಸಿದ್ದಾರೆ. ಇದನ್ನು ಸಂಬಂಧಿತ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಅದಾಗ್ಯೂ, ಸಂಬಂಧಿತ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಿದೆ. ಸಂಜ್ಞೇಯ ಪರಿಗಣಿಸುವುದು ಕಾನೂನಿಗೆ ವಿರುದ್ಧವಾಗಿದ್ದು, ತನ್ನ ಕರ್ತವ್ಯ ನಿಭಾಯಿಸುವಾಗ ಸರ್ಕಾರಿ ಸಿಬ್ಬಂದಿಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ರಕ್ಷಣೆ ಇರುತ್ತದೆ. ಈ ಸಂದರ್ಭದಲ್ಲಿ ಅನುಮತಿ ಇಲ್ಲದೇ ಯಾವುದೇ ಸಂಬಂಧಿತ ನ್ಯಾಯಾಲಯವು ಸಂಜ್ಞೇಯ ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲ ಸಂತೋಷ್ ಬಿ ರಾವೂತ್ ಅವರು “ಅರ್ಜಿದಾರರು ಸರ್ಕಾರಿ ಸಿಬ್ಬಂದಿಯಾಗಿದ್ದು, ಅವರ ವಿರುದ್ಧ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿ, ವಿಚಾರಣೆ ಮುಂದುವರಿಸಲು ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಅನುಮತಿ ಪಡೆಯುವುದು ಕಡ್ಡಾಯ. ತನಿಖಾಧಿಕಾರಿಯು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಅದಾಗ್ಯೂ, ಸಂಬಂಧಿತ ನ್ಯಾಯಾಲಯವು ಅಪರಾಧದ ಕುರಿತು ಸಂಜ್ಞೇಯ ತೆಗೆದುಕೊಂಡಿದೆ. ಸಕ್ಷಮ ಪ್ರಾಧಿಕಾರ ಅನುಮತಿ ನಿರಾಕರಿಸಿದ ಹೊರತಾಗಿಯೂ ಸಂಜ್ಞೇಯ ತೆಗೆದುಕೊಳ್ಳುವ ಮೂಲಕ ಅಧೀನ ನ್ಯಾಯಾಲಯ ಪ್ರಮಾದ ಎಸಗಿದೆ” ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯ ಒಪ್ಪಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಗದೀಶ್ ಅವರು ಸವದತ್ತಿ ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2011ರ ಜುಲೈ 27ರಂದು ಅವರ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಐಪಿಸಿ ಸೆಕ್ಷನ್‌ಗಳಾದ 471, 420, 465, 468, 471 ಜೊತೆಗೆ 34 ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಪೊಲೀಸರು ಸಂಬಂಧಿತ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯವು ಇದರ ಸಂಜ್ಞೇಯ ಪರಿಗಣಿಸಿ, ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.