John Brittas and Rajya Sabha with Supreme Court

John Brittas and Rajya Sabha with Supreme Court

ಸುದ್ದಿಗಳು

ಕೊಲಿಜಿಯಂ ವ್ಯವಸ್ಥೆಯಿಂದ ನ್ಯಾಯಾಂಗದ ಸ್ವಾತಂತ್ರ್ಯ ವಿರೂಪ: ರಾಜ್ಯಸಭೆಯಲ್ಲಿ ಕೇರಳ ಸಂಸದ ಜಾನ್ ಬ್ರಿಟ್ಟಾಸ್‌ ಆಕ್ಷೇಪ

Bar & Bench

ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಕೇರಳ ಸಂಸದ ಜಾನ್‌ ಬ್ರಿಟ್ಟಾಸ್‌ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉಂಟಾಗಿರುವ ವೈವಿಧ್ಯತೆಯ ಬಗ್ಗೆ ಪ್ರಸ್ತಾಪಿಸಿದರು. ಜೊತೆಗೆ ನ್ಯಾಯಾಂಗ ನೇಮಕಾತಿ ವ್ಯವಸ್ಥೆಯನ್ನೂ ಟೀಕಿಸಿದರು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನಗಳು ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ, 2021 ರ ಮೇಲಿನ ಭಾಷಣದಲ್ಲಿ ಸಿಪಿಎಂ ಸಂಸದರಾಗಿರುವ ಬ್ರಿಟ್ಟಾಸ್‌ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಮತೋಲಿತ ರೀತಿಯಲ್ಲಿ ಬ್ರಾಹ್ಮಣ ಪ್ರಾತಿನಿಧ್ಯವಿದೆ ಎಂದರು. ಇದುವರೆಗಿನ ಸುಪ್ರೀಂಕೋರ್ಟ್‌ನ 47 ಮುಖ್ಯ ನ್ಯಾಯಮೂರ್ತಿಗಳಲ್ಲಿ 14 ಮಂದಿ ಬ್ರಾಹ್ಮಣರಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೊಲಿಜಿಯಂ ವ್ಯವಸ್ಥೆಯಿಂದ ನ್ಯಾಯಾಂಗದ ಸ್ವಾತಂತ್ರ್ಯ ವಿರೂಪವಾಗುತ್ತಿರುವುದನ್ನು ವಿವರಿಸಿದ ಅವರು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ (ಎನ್‌ಜೆಎಸಿ) ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರ ಹೇಗೆ ಮೌನವಾಗಿದೆ ಎಂಬುದನ್ನು ವಿವರಿಸಿದರು. ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಸರ್ಕಾರದ ನಿಲುವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮಾತ್ರ ನಿಗೂಢತೆ ಕತ್ತಲು ಮತ್ತು ಗೌಪ್ಯತೆ ಇದೆ ಕಾನೂನು ಸಚಿವರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಅವರು ಟೀಕಿಸಿದರು.

ನ್ಯಾ. ಅಖಿಲ್‌ ಖುರೇಷಿ ಅವರಿಗೆ ಏಕೆ ಪದೋನ್ನತಿ ನೀಡಲಿಲ್ಲ ಎಂಬುದನ್ನು ಎತ್ತಿ ತೋರಿಸಿದ ಸಂಸದರು “ಅವರು ಮಾಡಿದ ಅಪರಾಧವಾದರೂ ಏನು? ಪ್ರಭಾವಿ ವ್ಯಕ್ತಿಯೊಬ್ಬರನ್ನು ಜೈಲಿಗೆ ಕಳುಹಿಸಿದ್ದಕ್ಕಾಗಿ ಅವರನ್ನು ಹೊಣೆ ಮಾಡಲಾಗಿದೆ ತಮಗೆ ಅನಾನುಕೂಲಕರವಾದ ನೇಮಕಾತಿಗಳನ್ನು ಸರ್ಕಾರ ತಡೆ ಹಿಡಿದಿದೆ” ಎಂದರು. 2010ರ, ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನ್ಯಾಯಮೂರ್ತಿ ಖುರೇಶಿ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದರು.

ಜಾನ್‌ ಬ್ರಿಟ್ಟಾಸ್‌ ಮುಂದುವರೆದು “ನ್ಯಾಯಾಂಗ ನೇಮಕಾತಿ ನಡೆಯುತ್ತಿರುವ ಬಗೆ ಮತ್ತು ನ್ಯಾಯಾಂಗವನ್ನು ಹಾಳುಗೆಡವುತ್ತಿರುವುದನ್ನು ಕಂಡು ಸಂವಿಧಾನ ಶಿಲ್ಪಿ ಮತ್ತು ಪ್ರಪ್ರಥಮ ಕಾನೂನು ಸಚಿವ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಆತ್ಮ ವಿಚಲಿತಗೊಳ್ಳಬಹುದು” ಎಂದು ಟೀಕಿಸಿದರು.