Prime Minister Narendra Modi, COVID-19 vaccine certificate

 
ಸುದ್ದಿಗಳು

ಕೋವಿಡ್‌ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಭಾವಚಿತ್ರ ತೆಗೆದು ಹಾಕಲು ಕೋರುವುದು ಮೂಲಭೂತ ಹಕ್ಕಲ್ಲ: ಕೇರಳ ಹೈಕೋರ್ಟ್‌

ಕೋವಿಡ್‌ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿಯವರ ಚಿತ್ರವನ್ನು ತೆಗೆದುಹಾಕಲು ಕೋರಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

Bar & Bench

ಕೋವಿಡ್‌ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಲು ಕೋರುವುದು ಮೂಲಭೂತ ಹಕ್ಕಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಮಣಿಕುಮಾರ್ ಮತ್ತು ನ್ಯಾ. ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಇದೇ ವಿಚಾರವಾಗಿ ಏಕಸದಸ್ಯ ಪೀಠ ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಆಲಿಸಿತು. ಕೋವಿಡ್‌ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿಯವರ ಚಿತ್ರವನ್ನು ತೆಗೆದುಹಾಕಲು ಕೋರಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಏಕಸದಸ್ಯ ಪೀಠವು ಈ ಹಿಂದೆ ವಜಾಗೊಳಿಸಿತ್ತು.

ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದ ವಿಭಾಗೀಯ ಪೀಠವು, "ಪ್ರಮಾಣಪತ್ರದಿಂದ ಪ್ರಧಾನಿಯವರ ಭಾವಚಿತ್ರವನ್ನು ತೆಗೆದುಹಾಕವಂತೆ ಯಾವುದೇ ನಾಗರಿಕರು ಮೂಲಭೂತ ಹಕ್ಕನ್ನು ಉಲ್ಲೇಖಿಸಿ ಕೋರುವ ಅಧಿಕಾರ ಹೊಂದಿಲ್ಲ. ನಮ್ಮ ಅಭಿಪ್ರಾಯದಲ್ಲಿ ಅಂತಹ ಅಧಿಕಾರ ಮೂಲಭೂತ ಹಕ್ಕಿಗೆ ಒಳಪಡುವುದಿಲ್ಲ" ಎಂದು ತನ್ನ ಆದೇಶದಲ್ಲಿ ಹೇಳಿದೆ. ಮುಂದುವರೆದು, ಸರ್ಕಾರದ ಉದ್ದೇಶವು ನಾಗರಿಕರ ಗಮನವನ್ನು ಸೆಳೆಯುವುದಾಗಿದ್ದು ಸರ್ಕಾರದೊಂದಿಗೆ ಸಹಕರಿಸಲು ಪ್ರೇರೆಪಿಸುವುದು, ಉತ್ತೇಜಿಸುವುದಾಗಿದೆ. ಆ ಮೂಲಕ ಹೆಚ್ಚು ಜನರು ಲಸಿಕೆಯನ್ನು ತೆಗೆದುಕೊಳ್ಳುವಂತೆ ಮಾಡುವುದಾಗಿದೆ ಎಂದು ಹೇಳಿದೆ.

ಕಾಲದ ಅಗತ್ಯಕ್ಕೆ ತಕ್ಕಂತೆ ಎಲ್ಲರ ಒಳಿತಿಗಾಗಿ ನೀತಿನಿರೂಪಣೆಗಳನ್ನು ರೂಪಿಸಿ, ಅನ್ವಯಿಸುಲು ಕಾರ್ಯಾದೇಶವನ್ನು ನಿಡುವುದು ಸಂವಿಧಾನದ 73ನೇ ವಿಧಿಯಡಿ ಸರ್ಕಾರಕ್ಕೆ ದೊರೆತಿರುವ ಅಧಿಕಾರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಂತಿಮವಾಗಿ ಮೇಲ್ಮನವಿಯನ್ನು ವಜಾಗೊಳಿಸಿತು.