ಸುದ್ದಿಗಳು

ಏಕಾಂಗಿ ವಾಹನ ಸವಾರಿ ವೇಳೆ ಮುಖಗವಸು ಧರಿಸಲು ಜನರಿಗೆ ನಿರ್ದೇಶನ ನೀಡಿಲ್ಲ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

Bar & Bench

ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮುಖಗವಸು ಧರಿಸುವಂತೆ ಜನರಿಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ ಎಂದು ಕೇಂದ್ರ ಸರ್ಕಾರ, ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. (ಸೌರಭ್ ಶರ್ಮಾ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಪೂರ್ವ ಮತ್ತಿತರರ ನಡುವಣ ಪ್ರಕರಣ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಂವಿಧಾನದ ಏಳನೇ ಶೆಡ್ಯೂಲ್‌ನ ಮೂರನೇ ಪಟ್ಟಿಯ ಆರನೇ ಪ್ರವೇಶಿಕೆಯಲ್ಲಿ ಸಾರ್ವಜನಿಕ ಆರೋಗ್ಯ ಎಂಬುದು ರಾಜ್ಯಪಟ್ಟಿಗೆ ಸೇರಿದ ವಿಷಯ ಎಂದು ಕೇಂದ್ರ ಸಮರ್ಥನೆ ನೀಡಿದೆ. ಹೀಗಾಗಿ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆ ಎಂಬುದು ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ವಿಶೇಷ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗಿದೆ.

"… ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮುಖವಾಡ ಧರಿಸಲು ಜನರಿಗೆ ಸೂಚಿಸುವ ಯಾವುದೇ ಮಾರ್ಗಸೂಚಿಗಳನ್ನು ಪ್ರತಿವಾದಿ ಹೊರಡಿಸಿಲ್ಲ. ಆರೋಗ್ಯ ರಾಜ್ಯ ವಿಷಯವಾಗಿದ್ದು ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿ ನಂಬರ್‌ 1ಕ್ಕೆ (ದೆಹಲಿ ಸರ್ಕಾರ) ಸಂಬಂಧಿಸಿದೆ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮುಖಗವಸು ಧರಿಸದೇ ಏಕಾಂಗಿಯಾಗಿ ಕಾರು ಚಾಲನೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ವಕೀಲ ಸೌರಭ್‌ ಶರ್ಮಾ ಎಂಬುವವರಿಗೆ ಕೆಲ ತಿಂಗಳುಗಳ ಹಿಂದೆ ರೂ 500 ದಂಡ ವಿಧಿಸಲಾಗಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಅವರು ರೂ 10 ಲಕ್ಷ ಪರಿಹಾರ ಕೋರಿದ್ದರು. ತಮ್ಮ ಖಾಸಗಿ ವಾಹನದಲ್ಲಿ ಏಕಾಂಗಿಯಾಗಿ ಇದ್ದುದರಿಂದ ದಂಡ ವಿಧಿಸಿದ್ದು ಅನ್ಯಾಯ ಮತ್ತು ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿದ್ದರು.

2005ರ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 22ರ ನಿಬಂಧನೆಗಳ ಅಡಿಯಲ್ಲಿ, ರಾಜ್ಯ ಕಾರ್ಯಕಾರಿ ಸಮಿತಿಯು ಸ್ಥಳೀಯ ಸನ್ನಿವೇಶ ಮತ್ತು ಸಾಂಕ್ರಾಮಿಕತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಅಧಿಕಾರ ಹೊಂದಿದೆ ಎಂದು ಕೇಂದ್ರ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕತೆಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದು, ಒಬ್ಬ ವ್ಯಕ್ತಿ ವಾಹನದಲ್ಲಿ ಏಕಾಂಗಿಯಾಗಿರುವಾಗ ಮುಖಗವಸನ್ನು ಕಡ್ಡಾಯವಾಗಿ ಧರಿಸುವ ಕುರಿತಂತೆ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನವನ್ನು ಇದು ಒಳಗೊಂಡಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅರ್ಜಿಯಲ್ಲಿರುವ ಪಕ್ಷಕಾರರ ಪಟ್ಟಿಯಿಂದ ತನ್ನನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ, ನ್ಯಾಯಾಲಯವನ್ನು ಕೋರಿದೆ.

ವಕೀಲ ಜಾಬಿ ಪಿ ವರ್ಗೀಸ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಸರ್ಕಾರವನ್ನು ವಕೀಲ ದೇವೇಶ್ ಸಿಂಗ್ ಪ್ರತಿನಿಧಿಸಿದ್ದರು. ವಕೀಲ ಫರ್ಮಾನ್ ಅಲಿ ಆರೋಗ್ಯ ಸಚಿವಾಲಯದ ಪರವಾಗಿ ಅಫಿಡವಿಟ್ ಸಲ್ಲಿಸಿದರು.