ಸುದ್ದಿಗಳು

ತಪ್ಪು ನಡೆದಿಲ್ಲ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್, ಸಿಸೋಡಿಯಾ ಖುಲಾಸೆ ಎತ್ತಿಹಿಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿಯ ನಿವೃತ್ತ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ 2018ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯದ ಆದೇಶವನ್ನು ದೆಹಲಿಯ ವಿಶೇಷ ನ್ಯಾಯಾಲಯವೊಂದು ಎತ್ತಿ ಹಿಡಿದಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇತರ ಆಮ್ ಆದ್ಮಿ ಸದಸ್ಯರು ನಿರಾಳಗೊಂಡಿದ್ದಾರೆ [ಅಂಶು ಪ್ರಕಾಶ್‌ ಮತ್ತು ದೆಹಲಿ ಸರ್ಕಾರದ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯ ಆರೋಪಗಳನ್ನು ಪರಿಗಣಿಸಿದ್ದು ಅವು ಆಧಾರ ರಹಿತ ಎಂದು ಕಂಡುಕೊಂಡು ಎಲ್ಲರನ್ನೂ ಖುಲಾಸೆಗೊಳಿಸಿದೆ ಎಂದು ಮರುಪರಿಶೀಲನಾ ಅರ್ಜಿ ಇತ್ಯರ್ಥಪಡಿಸುವಾಗ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ತಿಳಿಸಿದರು.

"ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಯಾವುದೇ ದುರ್ಬಲತೆ, ಅಕ್ರಮ ಇಲ್ಲವೇ ವಿರೋಧಾಭಾಸ ಅಥವಾ ಅನುಚಿತತೆ ಕಂಡು ಬಂದಿಲ್ಲ. ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿದ ನಂತರ ಅದನ್ನು ಪುರಸ್ಕರಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್, ಸಿಸೋಡಿಯಾ ಹಾಗೂ ಇತರೆ ಹನ್ನೊಂದು ಶಾಸಕರ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 186, 323, 332, 342, 353, 504, 506 (ii), 120B, 109, 114, 149, 34 ಮತ್ತು 36ರ ಅಡಿಯಲ್ಲಿ ಆರೋಪ ಹೊರಿಸಿದ್ದರು.