ಸುದ್ದಿಗಳು

ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಮೃತಪಟ್ಟರೆ ಪರಿಹಾರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್

ಅತಿ ವೇಗದ ಚಾಲನೆ ಮಾಡುತ್ತಿದ್ದ ಚಾಲಕನೊಬ್ಬ ವಾಹನದ ನಿಯಂತ್ರಣ ಕಳೆದುಕೊಂಡು ಸಾವನ್ನಪ್ಪಿದ ಘಟನೆಯ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

Bar & Bench

ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಕ್ಕೀಡಾದ  ಮೃತ ವ್ಯಕ್ತಿಯ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ  ಪಾವತಿಸುವ ಹೊಣೆ ವಿಮಾ ಕಂಪನಿಗಳದ್ದಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಜಿ ನಾಗರತ್ನ ಮತ್ತಿತರರು ಮತ್ತು ಜಿ ಮಂಜುನಾಥ ಇನ್ನಿತರರ ನಡುವಣ ಪ್ರಕರಣ].

2014ರಲ್ಲಿ ಕರ್ನಾಟಕದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಎನ್ ಎಸ್ ರವೀಶ ಅವರ ಪತ್ನಿ, ಮಗ ಮತ್ತು ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ವಜಾಗೊಳಿಸಿತು.

ಯುನೈಟೆಡ್ ಇಂಡಿಯಾ ವಿಮಾ ಕಂಪನಿ ₹80 ಲಕ್ಷ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿ ಕರ್ನಾಟಕ ಹೈಕೋರ್ಟ್‌ ನವೆಂಬರ್ 2024ರಲ್ಲಿ ನೀಡಿದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ತನಗೆ ಯಾವುದೇ ಸಕಾರಣ ಇಲ್ಲ‌ ಎಂದು ಪೀಠ ಹೇಳಿದೆ.

ರವೀಶ್‌ ಅವರ ಸ್ವಯಂಕೃತ ತಪ್ಪಿನಿಂದಲೇ ಅಪಘಾತ ಸಂಭವಿಸಿರುವುದರಿಂದ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 166ರ ಅಡಿಯಲ್ಲಿ ಪರಿಹಾರ ಪಡೆಯುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ಜೂನ್ 18, 2014 ರಂದು ರವೀಶ ತನ್ನ ತಂದೆ, ಸಹೋದರಿ ಮತ್ತು ಮಕ್ಕಳೊಂದಿಗೆ ಮಲ್ಲಸಂದ್ರ ಗ್ರಾಮದಿಂದ ಅರಸೀಕೆರೆಗೆ ಫಿಯೆಟ್ ಲಿನಿಯಾ  ಕಾರಿನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು.

ಪೊಲೀಸರ ಪ್ರಕಾರ, ರವೀಶ ವೇಗವಾಗಿ ವಾಹನ ಚಲಾಯಿಸುತ್ತಿದ್ದರು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರು ಮತ್ತು ಮೈಲನಹಳ್ಳಿ ಗೇಟ್ ಬಳಿ ವಾಹನದ ನಿಯಂತ್ರಣ ಕಳೆದುಕೊಂಡರು. ಕಾರು ಪಲ್ಟಿಯಾಗಿ ತಲೆಗೆ ಗಾಯವಾಗಿ ಸಾವನ್ನಪ್ಪಿದರು.

ಐಪಿಸಿ ಸೆಕ್ಷನ್ 279 (ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ), 337 (ದುಡುಕಿನ ಅಥವಾ ನಿರ್ಲಕ್ಷ್ಯದ ಮೂಲಕ ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಮಾಡುವ ಮೂಲಕ ಯಾವುದೇ ವ್ಯಕ್ತಿಗೆ  ಧಕ್ಕೆ) ಮತ್ತು 304-A (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪರಿಣಾಮ  ಘಟನೆಗೆ ರವೀಶ್‌ ಅವರೇ ಹೊಣೆ ಎಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಟೈರ್ ಸ್ಫೋಟದಿಂದ ಅಪಘಾತ ಸಂಭವಿಸಿದೆ ಎಂದು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಎದುರು, ರವೀಶ ಅವರ ಕುಟುಂಬ ವಾದಿಸಿತ್ತು. ಅದು ಪರಿಹಾರ ನೀಡದೆ ಇದ್ದುದರಿಂದ ಕುಟುಂಬ ಹೈಕೋರ್ಟ್‌ ಮೆಟ್ಟಿಲೇರಿತ್ತು. ಟೈರ್‌ ಸ್ಫೋಟ ಹೇಳಿಕೆ ನಂತರದ ಆಲೋಚನೆಯಾಗಿದೆ ಎಂದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿತ್ತು.

[ತೀರ್ಪಿನ ಪ್ರತಿ]

G__Nagarathna___Ors__vs__G__Manjunatha___Anr_.pdf
Preview