Vikas Singh and Supreme Court 
ಸುದ್ದಿಗಳು

ಸುಪ್ರೀಂಕೋರ್ಟ್ ವಕೀಲರು ಹೆಚ್ಚು ಅರ್ಹರು ಹೇಳಿಕೆ: ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಸ್ಪಷ್ಟೀಕರಣ

ಆದರೂ ಅವರು “ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಪ್ರತಿಯೊಬ್ಬ ವಕೀಲರನ್ನು ಅವರು ಎಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರೂ ಅರ್ಹತೆ ಆಧಾರದಲ್ಲಿ ಪದೋನ್ನತಿಗೆ ಪರಿಗಣಿಸಬೇಕು” ಎಂದು ಸಮರ್ಥಿಸಿಕೊಂಡಿದ್ದಾರೆ.

Bar & Bench

ಹೈಕೋರ್ಟ್‌ ಸಹೋದ್ಯೋಗಿಗಳಿಗಿಂತಲೂ ಸುಪ್ರೀಂಕೋರ್ಟ್‌ ವಕೀಲರು ಹೆಚ್ಚು ಅರ್ಹರು ಎಂದು ತಾವು ನೀಡಿದ್ದ ಹೇಳಿಕೆ ಸುಪ್ರೀಂಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಪರಿಗಣಿಸುವುದಕ್ಕಾಗಿ ಸೀಮಿತ ಉದ್ದೇಶ ಹೊಂದಿತ್ತು ಎಂದು ಸುಪ್ರೀಂಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. "ಸಮರ್ಥ ಹೈಕೋರ್ಟ್‌ ವಕೀಲರನ್ನು ನೇಮಕಾತಿಗೆ ಪರಿಗಣಿಸಬಾರದು ಎಂಬ ಉದ್ದೇಶ ಅದಕ್ಕಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಸಿಂಗ್‌ ಅವರು ಜೂನ್ 8ರಂದು ಬರೆದಿದ್ದ ಪತ್ರದ ಬಗ್ಗೆ ದೇಶದ ವಿವಿಧೆಡೆಯ ಹೈಕೋರ್ಟ್‌ ವಕೀಲರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೋಲಾಹಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಿಂಗ್‌ ಭಾನುವಾರ ಪತ್ರ ಬರೆದು ಸ್ಪಷ್ಟ ನೆ ನೀಡಿದ್ದಾರೆ.

“ನಾನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಸುಪ್ರೀಂಕೋರ್ಟ್‌ ವಕೀಲರು ಹೆಚ್ಚು ಅರ್ಹರು ಎಂದು ಉಲ್ಲೇಖಿಸಿರುವುದು ಹೈಕೋರ್ಟ್‌ ಕೊಲಿಜಿಯಂಗಳು ಸಮಾನತೆಯ ನೆಲೆಯಲ್ಲಿ ಪದೋನ್ನತಿಗೆ ಇವರನ್ನೂ ಪರಿಗಣಿಸಲಿ ಎಂಬ ಸೀಮಿತ ನೆಲೆಯಲ್ಲಿ ಮಾತ್ರ. ವಿವಿಧ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ದಕ್ಷ ವಕೀಲರನ್ನು ನೇಮಕಾತಿಯಿಂದ ಕೈಬಿಡಬೇಕು ಎಂಬ ಉದ್ದೇಶ ಅದಕ್ಕಿಲ್ಲ ಎಂದು ಅವರು ಸ್ಪಷ್ಟೀಕರಣ ಪತ್ರದಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವಂತೆ ಸಿಜೆಐ ರಮಣ ಅವರಿಗೆ ಸಿಂಗ್‌ ಜೂನ್ 8ರಂದು ಮನವಿ ಮಾಡಿದ್ದರು. ಪತ್ರದಲ್ಲಿ ಸುಪ್ರೀಂಕೋರ್ಟ್‌ ವಕೀಲರು ಹೆಚ್ಚು ಅರ್ಹರು ಎಂದು ಅವರು ಹೇಳಿದ್ದ ಒಂದು ಮಾತು ವಿವಿಧ ವಕೀಲರ ಸಂಘಗಳಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿತ್ತು.

" ಹೈಕೋರ್ಟ್‌ಗಳಲ್ಲಿ ನಿಯಮಿತವಾಗಿ ಪ್ರಾಕ್ಟೀಸ್‌ ಮಾಡದೇ ಇರುವುದರಿಂದ ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ವಾಣಿಜ್ಯ ಕಾನೂನು ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿಭಾಯಿಸಲು ಅಪಾರ ಅನುಭವ ಮತ್ತು ಮಾನ್ಯತೆ ಇದ್ದರೂ, ಸುಪ್ರೀಂಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಕೀಲರನ್ನು ಹೈಕೋರ್ಟ್ ಕೊಲಿಜಿಯಂಗಳು ಪದೋನ್ನತಿಗೆ ಪರಿಗಣಿಸುವುದು ವಿರಳ. ವೃತ್ತಿಪರವಾಗಿ ಹೆಚ್ಚು ಅರ್ಹತೆ ಇದ್ದರೂ ಅವರು ಹಾಗೆ ಪರಿಗಣಿತರಾಗುವುದಿಲ್ಲ” ಎಂದು ಸಿಂಗ್‌ ಹೇಳಿಕೆ ನೀಡಿದ್ದರು.

ಈ ಬಗ್ಗೆ ಅಸಮಾಧಾನ ಸೂಚಿಸಿ ದೆಹಲಿ ಹೈಕೋರ್ಟ್‌ ವಕೀಲರ ಸಂಘ (ಡಿಎಚ್‌ಸಿಬಿಎ), ಬೆಂಗಳೂರು ವಕೀಲರ ಸಂಘ (ಎಎಬಿ), ಕಲ್ಕತ್ತಾ ಹೈಕೋರ್ಟ್‌ ವಕೀಲರ ಸಂಘ ಪತ್ರ ಬರೆದಿದ್ದವು. ಕೆಲವು ವಕೀಲರು ಕೂಡ ವೈಯಕ್ತಿಕವಾಗಿ ಪತ್ರ ಬರೆದಿದ್ದರು. ಅಲ್ಲದೆ ಈ ಬಗ್ಗೆ ಕೆಲ ವೆಬಿನಾರ್‌ಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಸಿಂಗ್‌ ಅವರು ಸುಪ್ರೀಂಕೋರ್ಟ್‌ ವಕೀಲರನ್ನು ನೇಮಕಾತಿಗೆ ಪರಿಗಣಿಸುವಾಗ ಪಾರದರ್ಶಕ ಮತ್ತು ದೃಢವಾದ ವ್ಯವಸ್ಥೆ ರೂಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ರೀತಿ ಹೇಳಿದ್ದಾಗಿ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ಆದರೂ ಅವರು "ದೇಶದಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ಪ್ರತಿಯೊಬ್ಬ ವಕೀಲರನ್ನು ಅವರು ಎಲ್ಲಿಯೇ ಪ್ರಾಕ್ಟೀಸ್‌ ಮಾಡಿದ್ದರೂ ಅರ್ಹತೆ ಆಧಾರದಲ್ಲಿ ಪದೋನ್ನತಿಗೆ ಪರಿಗಣಿಸಬೇಕು" ಎಂದು ಸಮರ್ಥಿಸಿಕೊಂಡಿದ್ದಾರೆ.